ಹಾಸಿಗೆ ಕೆಳಗೆ ಪತ್ತೆಯಾಯ್ತು 12 ವರ್ಷದ ಬಾಲಕನ ಮೃತದೇಹ: ಸ್ನೇಹಿತನನ್ನು ನೋಡಿ ಉಳಿದವರಿಗೆ ಶಾಕ್​..!

student wardha (1)
Published on

ವಾರ್ಧಾ: ನೆರೆಯ ರಾಜ್ಯದ ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ವಿಚಾರ ಪದೇ ಪದೇ ಪ್ರಸ್ತಾಪವಾಗುತ್ತಿರುವಾಗಲೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, 12 ವರ್ಷದ ಬಾಲಕ ಶವ ಶಾಲೆಯಲ್ಲಿಯೇ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ನಾರಾದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಶಿವಂ ಸನೋಜ್ ಉಕೆ ಎಂದು ಗುರುತಿಸಲಾಗಿದ್ದು, ಅಮರಾವತಿ ಜಿಲ್ಲೆಯ ಮೆಲ್ಘಾಟ್‌ನ ಚಿಕಲ್ದಾರ ತಾಲೂಕಿನ ದೋಮಕ್ಕೆ ಸೇರಿದವನಾಗಿದ್ದಾನೆ. ಬುಧವಾರ ರಾತ್ರಿ 8:30ರ ಸುಮಾರಿಗೆ ಶಾಲೆಯ ವಿದ್ಯಾರ್ಥಿಗಳು ಮಲಗಲು ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ಮಕ್ಕಳು ಮಾಮೂಲಿ ಜಾಗದಿಂದ ಹಾಸಿಗೆ ತೆಗೆಯುತ್ತಿದ್ದರು. ಈ ವೇಳೆ ಹಾಸಿಗೆಯ ಕೆಳಗೆ ಶಿವಂ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಕಂಡ ವಿದ್ಯಾರ್ಥಿಗಳು ಶಾಕ್​ ಆಗಿದ್ದು, ಘಟನೆ ಬೆಳಕಿಗೆ ಬಂದ ನಂತರ ಆಶ್ರಮ ಶಾಲೆಯಲ್ಲಿ ಸಂಚಲನ ಮೂಡಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕಾರಂಜಾ ಘಡ್ಗೆ ಪೊಲೀಸರು ಪಂಚನಾಮೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿದ್ಯಾರ್ಥಿ ಸಾವಿಗೆ ನಿಖರವಾದ ಇನ್ನು ತಿಳಿದು ಬಂದಿಲ್ಲವಾದರೂ, ವರದಿ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಈ ಮಗುವಿನ ಸಾವು ಅನುಮಾನಾಸ್ಪದವಾಗಿರುವುದರಿಂದ ಪ್ರಕರಣದ ನಿಗೂಢತೆ ಹೆಚ್ಚಿದೆ. ಈ ಆಶ್ರಮ ಶಾಲೆಯು ಆರ್ವಿ ವಿಧಾನ ಸಭೆಯ ಬಿಜೆಪಿ ಶಾಸಕ ದಾದಾರಾವ್ ಕೆಚೆ ಅವರಿಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಇನ್ನು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದ್ದು, ತನಿಖೆಯಿಂದ ಯಾವ ಮಾಹಿತಿ ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net