ಎಷ್ಟು ಬೇಕಾದರೂ... RTO ಅಧಿಕಾರಿಗಳ ಲಂಚದ ಬೇಡಿಕೆಗೆ ಬೇಸತ್ತು ಪ್ರಾಣ ಕಳೆದುಕೊಳ್ಳಲು ಮುಂದಾದ ವಾಹನ ಮಾಲೀಕ

Truck Viral Video
Published on

ಹೈದರಾಬಾದ್​: ಇಂದು ಯಾವುದೇ ಸರ್ಕಾರಿ ಕೆಲಸ ಆಗಬೇಕೆಂದರೂ ಅಲ್ಲಿ ಲಂಚವೇ ಪ್ರಧಾನ. ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ. ಸರ್ಕಾರಿ ಸೇವೆ ಜನ ಸಾಮಾನ್ಯನ ಹಕ್ಕು ಆಗಿದ್ದರೂ ಅದನ್ನು ಪಡೆಯಲು ತಾನು ಬೆವರು ಸುರಿಸಿ ದುಡಿದ ಹಣವನ್ನು ಲಂಚವಾಗಿ ಕೊಡಬೇಕಿದೆ. ಸರ್ಕಾರಿ ಅಧಿಕಾರಿಗಳು ಜನರ ಸುಲಿಗೆ ಮಾಡುತ್ತಿದ್ದು, ಲಂಚಕ್ಕೆ ಕಡಿವಾಣ ಹಾಕಲು ಎಷ್ಟೇ ಕಾನೂನು ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಇದೀಗ ತೆಲಂಗಾಣದ ಪೆದ್ದಪಲ್ಲಿಯಲ್ಲಿ ವ್ಯಕ್ತಿಯೊಬ್ಬರು ಆರ್​ಟಿಒ (RTO) ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕಚೇರಿಯ ಮುಂಭಾಗವೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸದ್ಯ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬರುತ್ತಿದೆ.

ಪ್ರಕರಣದ ಹಿನ್ನೆಲೆ

ಪೆದ್ದಪಲ್ಲಿ ನಿವಾಸಿ ಅನಿಲ್ ಗೌಡ್​ ಎಂಬುವವರು ಟ್ರಾನ್ಸ್​ಪೋರ್ಟ್ ಕಂಪನಿಯೊಂದನ್ನು ನಡೆಸುತ್ತಿದ್ದು, ಸ್ಥಳೀಯ ಆರ್​ಟಿ (RTO) ಅಧಿಕಾರಿಗಳು ಪ್ರತಿ ತಿಂಗಳು ಇಂತಿಷ್ಟು ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ಅನಿಲ್​ ನಿರಾಕರಿಸಿದ್ದು, ಅಧಿಕಾರಿಗಳು ತಮ್ಮ ಮಾಲೀಕತ್ವದ ಲಾರಿಗಳ ಮೇಲೆ ಸುಳ್ಳು ಕೇಸ್ ಹಾಕಿ ವಾಹನಗಳನ್ನು ಸೀಜ್ ಮಾಡಿರುವುದಾಗಿ ಆರೋಪಿಸಿದ್ದಾರೆ.

ಅಗತ್ಯ ದಾಖಲೆಗಳಿದ್ದರು ಲಾರಿಯನ್ನು ಸೀಜ್ ಮಾಡಿರುವ ಕ್ರಮ ಖಂಡಿಸಿ ಅನಿಲ್ ಆರ್​ಟಿಒ ಕಚೇರಿ ಎದುರು ನಿಲ್ಲಿಸಲಾಗಿದ್ದ, ಲಾರಿಯನ್ನು ಏರಿ ತಮಗೆ ನ್ಯಾಯ ಸಿಗಲಿಲ್ಲವೆಂದರೆ ಕರೆಂಟ್ ವೈರ್​ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಘಿ ಬೆದರಿಸಿದ್ದು, ಲಂಚ ಕೇಳಿದ ಅಧಿಕಾರಿಗಳಿಗೆ ಕೊಡುವಂತೆ ಹಣವನ್ನು ಬಿಸಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net