ಮಾರ್ಗ ಮಧ್ಯೆಯೇ ಯುವತಿಯ ಮೇಲೆ ಮಚ್ಚಿನಿಂದ ದಾಳಿ ಮಾಡಿದ ಯುವಕ; ಬೆಚ್ಚಿಬಿದ್ದ ಸಾರ್ವಜನಿಕರು!

Crime
Published on

ಕೊಚ್ಚಿ: ಯುವಕನೊಬ್ಬ ಹಾಡಹಗಲೇ ಯುವತಿಯ ಮೇಲೆ ರಸ್ತೆ ಮಧ್ಯೆಯೇ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ದಾಳಿಯನ್ನು ನೋಡಿ ಇಡೀ ಸಾರ್ವಜನಿಕರು ಬೆಚ್ಚಿ ಬೀಳುವಂತಾಗಿದೆ. ಈ ಘಟನೆಯು ಕಲೂರಿನ ಆಜಾದ್ ರಸ್ತೆಯಲ್ಲಿ ನಡೆದಿದೆ.

ಮಾರ್ಗಮಧ್ಯೆ ಯುವಕ ಮತ್ತು ಇಬ್ಬರು ಯುವತಿಯರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಯುವಕ, ಮಚ್ಚಿನಿಂದ ಯುವತಿಯ ತಲೆ ಮೇಲೆ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಆಕೆಯ ಸ್ನೇಹಿತೆ, ಯುವತಿಯನ್ನು ರಕ್ಷಿಸುವಲ್ಲಿ ನೆರವಾಗಿದ್ದಾಳೆ. ಸದ್ಯ ಯುವತಿಯ ಕೈಗೆ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾಳೆ. ಸ್ನೇಹಿತೆ ತಡೆದ ಕಾರಣದಿಂದ ಯುವತಿ ಗಂಭಿರ ಗಾಯವಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ಇಲ್ಲವಾದರೇ ಜೀವಕ್ಕೇ ಆಪತ್ತು ಎದುರಾಗುತ್ತಿತ್ತು ಎಂದು ಈ ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಯುವಕನ ಮಚ್ಚಿನ ದಾಳಿಯಿಂದ ಯುವತಿ ರಕ್ತದ ಮಡುವಿನಲ್ಲಿ ರಸ್ತೆ ಮಧ್ಯೆಯೇ ಬಿದ್ದಿದ್ದಾಳೆ. ಈ ದೃಶ್ಯ ನಗರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟರಲ್ಲೇ ಯುವಕ ತನ್ನ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದೆ. ದಾಳಿಗೆ ಬಳಸಲಾದ ಮಚ್ಚನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಮಾರ್ಗ ಮಧ್ಯೆ ಇವರಿಬ್ಬರ ನಡುವೆ ಯಾವ ಕಾರಣಕ್ಕೆ ವಾಗ್ವಾದ ನಡೆದಿದೆ, ಮಚ್ಚಿನಿಂದ ಹಲ್ಲೆ ಮಾಡಲು ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ಹೊರಬರಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net