

ರಾಯ್ಪುರ್: ಆರೋಪಿಗಳು ಪೊಲೀಸ್ ವಿಚಾರಣೆಯ ವೇಳೆ ಬೆಚ್ಚಿ ಬೀಳುವಂತಹ ಮಾಹಿತಿಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಈ ಆರೋಪಿಯೊಬ್ಬ ವಿಚಾರಣೆಯ ವೇಳೆ ಕುತೂಹಲಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾನೆ. ಈತನ ಮಾತುಗಳನ್ನು ಕೇಳಿದ ಪೊಲೀಸ್ ಅಧಿಕಾರಿಗಳು ನಗೆಗಡಲಲ್ಲಿ ತೇಲಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚತ್ತೀಸ್ಗಢ ಪೊಲೀಸರು ಕಳ್ಳನೊಬ್ಬನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡು ಕುತೂಹಲಕರ ಸಂಗತಿಯೊಂದನ್ನು ಹೇಳಿದ್ದಾನೆ. ದರೋಡೆ ಮಾಡಿದಾಗ ನನಗೆ ಆರಂಭದಲ್ಲಿ ಸಂತೋಷವಾಯ್ತು. ನಂತರ ನಾನು ತಪ್ಪು ಮಾಡಿದ್ದೇನೆ ಎನ್ನುವುದು ನನಗೆ ಅರಿವಾಯ್ತು. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾನೆ.
ಪೊಲೀಸ್ ವರಿಷ್ಠಾಧಿಕಾರಿ ಡಾ.ಅಭಿಷೇಕ್ ಪಲ್ಲವ ಆರೋಪಿಯಲ್ಲಿ ಎಷ್ಟು ಹಣವನ್ನು ದರೋಡೆ ಮಾಡಿದ್ದೀಯ ಎಂದು ಕೇಳಿದ್ದಾರೆ. ಈ ವೇಳೆ ತಾನು 10 ಸಾವಿರ ರೂಪಾಯಿ ದರೋಡೆ ಮಾಡಿರುವುದಾಗಿ ಹೇಳಿದ್ದಾನೆ. ಹಣವನ್ನು ಏನು ಮಾಡಿದೆ ಎಂದು ಕೇಳಿದಾಗ, ನನಗೆ ನಿಧಾನವಾಗಿ ತಪ್ಪಿನ ಅರಿವಾಯ್ತು. ಹೀಗಾಗಿ ಕದ್ದ ಹಣವನ್ನು ಅಗತ್ಯವಿರುವವರಿಗೆ ಸಹಾಯ ಮಾಡಿದೆ. ರಸ್ತೆ ಬದಿಯಲ್ಲಿರುವ ಅನಾಥರಿಗೆ ಬೆಡ್ಶೀಟ್ ನೀಡಿದೆ ಎಂದು ಹೇಳಿದ್ದಾನೆ. (ಏಜೆನ್ಸೀಸ್)