ಮಹಾರಾಷ್ಟ್ರ ಸಚಿವೆ ಪಂಕಜಾಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಯುವಕನ ಬಂಧನ! Pankaja Munde

Pankaja Munde
Published on

Pankaja Munde : ಮಹಾರಾಷ್ಟ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಪಂಕಜಾ ಮುಂಡೆ ಅವರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುಣೆ ನಿವಾಸಿ ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ ಅವರಿಗೆ ಕಳೆದ ಕೆಲವು ದಿನಗಳಿಂದ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿದ್ದ. ಆಗಾಗ ಅವರಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದ. ಅಷ್ಟೇ ಅಲ್ಲದೆ, ಅಶ್ಲೀಲ ಸಂದೇಶಗಳನ್ನು ಸಹ ಕಳುಹಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಕಚೇರಿಯ ಸಾಮಾಜಿಕ ಜಾಲತಾಣ ಸಂಯೋಜಕ ನಿಖಿಲ್ ಭಮ್ರೆ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆಹಚ್ಚಿ ಇದೀಗ ಬಂಧಿಸಿದ್ದಾರೆ. ಮಹಾರಾಷ್ಟ್ರ ನೋಡಲ್ ಸೈಬರ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪುಣೆಯ ಅಮೋಲ್ ಕಾಳೆ (25) ಎಂದು ಗುರುತಿಸಲಾಗಿದೆ. ಈ ಆರೋಪಿ ಪಂಕಜಾ ಮುಂಡೆ ಅವರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿದ್ದು ಏಕೆ? ಇದರಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net