ಕ್ಯಾಮೆರಾ ಮುಂದೆ ಲೈಂಗಿಕ ಭಂಗಿ ಪ್ರದರ್ಶನ, ಒಳಉಡುಪು ಬಿಚ್ಚುವುದು... ಆಕ್ರೋಶದ ಕಿಡಿ ಹೊತ್ತಿಸಿದ ರಿಯಾಲಿಟಿ ಶೋ! House Arrest

Ajaz Khan
Published on

House Arrest : ಒಟಿಟಿ ಹಾಗೂ ಆನ್​ಲೈನ್​ ವೇದಿಕೆಗಳಲ್ಲಿ ಹರಡುತ್ತಿರುವ ಅಶ್ಲೀಲ ಕಂಟೆಂಟ್​ಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕೆಲ ದಿನಗಳ ಹಿಂದಷ್ಟೇ ಖಡಕ್​ ಸೂಚನೆ ಕೊಟ್ಟಿದೆ. ಇದರ ಬೆನ್ನಲ್ಲೇ ರಿಯಾಲಿಟಿ ಶೋ ಒಂದರ ಅಶ್ಲೀಲ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಚರ್ಚೆಯ ಜೊತೆಗೆ ಆಕ್ರೋಶವನ್ನು ಹುಟ್ಟುಹಾಕಿದೆ.

ವಯಸ್ಕರ ಚಿತ್ರಗಳಿಗೆ ಮೀಸಲಾಗಿರುವ ಉಲ್ಲು ಆ್ಯಪ್​ನಲ್ಲಿ ಹೌಸ್ ಅರೆಸ್ಟ್ ( House Arrest ) ಹೆಸರಿನಲ್ಲಿ ರಿಯಾಲಿಟಿ ಶೋ ಒಂದು ಮೂಡಿಬರುತ್ತಿದೆ. ಇದೀಗ ಆ ಶೋಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಒಂದು ವೈರಲ್​ ಆಗಿದೆ.​ ಆ ವಿಡಿಯೋ ಪೂರ್ತಿ ಕೇವಲ ಸೆಕ್ಸ್​ ಮತ್ತು ಸೆಕ್ಸ್​ ಪೊಸಿಸನ್​ ಬಗ್ಗೆಯೇ ಮಾತನಾಡಲಾಗಿದೆ. ಅಲ್ಲದೆ, ಸೆಕ್ಸ್​ ಭಂಗಿಗಳನ್ನು ಸಹ ಪ್ರದರ್ಶಿಸಲಾಗಿದೆ. ಹೀಗಾಗಿ ನೆಟ್ಟಿಗರು ವಿಡಿಯೋ ವಿರುದ್ಧ ಕಿಡಿಕಾರಿದ್ದಾರೆ. ಅಂದಹಾಗೆ, ಈ ಶೋ ಅನ್ನು ನಟ ಅಜಾನ್​ ಖಾನ್​ ಅವರು ನಡೆಸಿಕೊಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಶೋ ನಿರೂಪಕ ಅಜಾನ್​ ಖಾನ್​, ಕಾಮಸೂತ್ರದ ಬಗ್ಗೆ ಮಹಿಳಾ ಸ್ಪರ್ಧಿಯೊಬ್ಬರನ್ನು ಕೇಳುತ್ತಾರೆ. ಈ ವೇಳೆ ಆ ಸ್ಪರ್ಧಿ ನನಗೆ ಸೆಕ್ಸ್​ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ನನಗೆ ಒಂದೆರೆಡು ಭಂಗಿಗಳು ಮಾತ್ರ ಗೊತ್ತು. ಆದರೆ, ಸಂಪೂರ್ಣ ಗೊತ್ತಿಲ್ಲ ಎನ್ನುತ್ತಾರೆ. ಈ ವೇಳೇ ಮಧ್ಯ ಪ್ರವೇಶಿಸುವ ನಿರೂಪಕ, ಯಾವ್ಯಾವ ಭಂಗಿ ಗೊತ್ತು ಎಂದು ಪ್ರಶ್ನೆ ಮಾಡುತ್ತಾರೆ. ಬಳಿಕ ಉತ್ತರಿಸುವ ಆ ಸ್ಪರ್ಧಿ ಒಂದೆರೆಡು ಭಂಗಿಯ ಹೆಸರುಗಳನ್ನು ಹೇಳುತ್ತಾರೆ. ಬಳಿಕ ನಿರೂಪಕ, ನೀನು ಒಮ್ಮೆಯೂ ಪ್ರಯೋಗವನ್ನೇ ಮಾಡಿಲ್ವಾ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆಕೆ ಇಲ್ಲ ಎನ್ನುತ್ತಾಳೆ. ಈ ವೇಳೆ ನಿರೂಪಕ ಅಜಾನ್​, ಇಬ್ಬರು ಮಹಿಳಾ ಮತ್ತು ಇಬ್ಬರು ಪುರುಷ ಸ್ಪರ್ಧಿಯನ್ನು ಕೂಗಿ, ಭಂಗಿಯನ್ನು ಪ್ರದರ್ಶಿಸುವಂತೆ ಲೈವ್​ ಆಗಿ ಹೇಳುತ್ತಾರೆ. ಬಳಿಕ ಆ ಸ್ಪರ್ಧಿಗಳು ಸೆಕ್ಸ್​ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಕೊನೆಯಲ್ಲಿ ನಿರೂಪಕ ವಾವ್​ ಎಂದು ಹೇಳುತ್ತಾನೆ.

ಒಳಉಡುಪು ಬಿಚ್ಚುವುದು

ಇದೇ ಶೋಗೆ ಸಂಬಂಧಿಸಿದ ಮತ್ತೊಂದು ವಿಡಿಯೋದಲ್ಲಿ ಮಹಿಳಾ ಮತ್ತು ಪುರುಷ ಸ್ಪರ್ಧಿಗಳಿಂದ ಕ್ಯಾಮೆರಾ ಮುಂದೆಯೇ ಒಳಉಡುಪುಗಳನ್ನು ಬಿಚ್ಚಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ನೆಟ್ಟಿಗರ ಆಕ್ರೋಶ

ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದು ನಮ್ಮ ಭಾರತದಲ್ಲಿ ನಡೆಯುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ನಮ್ಮದು ಸಂಸ್ಕೃತಿಯ ತವರು. ಇಂಥಾ ಮಣ್ಣಿನಲ್ಲಿ ಈ ರೀತಿ ಅಶ್ಲೀಲತೆಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುವುದು ಸರಿಯೇ ಎಂದು ಕಿಡಿಕಾರಿದ್ದಾರೆ. ಇನ್ನು ಕೆಲ ನೆಟ್ಟಿಗರು ಯಾವಾಗ ಭಾರತ ಅಮೆರಿಕ ಆಯ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂಥಾ ಅಶ್ಲೀಲ ಕಂಟೆಂಟ್​ಗಳನ್ನು ಪ್ರಸಾರ ಮಾಡುತ್ತಿರುವ ಒಟಿಟಿ ಹಾಗೂ ಆನ್​​ಲೈನ್​ ವೇದಿಕೆಗಳನ್ನು ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದಾರೆ.

ಧ್ವನಿ ಎತ್ತಿದ ಸಂಸದೆ

ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಶ್ಲೀಲ ಕಂಟೆಂಟ್​ ವಿರುದ್ಧ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಧ್ವನಿ ಎತ್ತಿದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ ಕಂಟೆಂಟ್​ಗಳು ಹೆಚ್ಚಾಗಿವೆ. ಅಂತಹ ಹಲವಾರು ಅಪ್ಲಿಕೇಶನ್‌ಗಳು ಬಳಕೆಯಲ್ಲಿದ್ದು, ಅವುಗಳನ್ನು ನಿಷೇಧಿಸುವಂತೆ ಸಂಸದೀಯ ಸ್ಥಾಯಿ ಸಮಿತಿಗೆ ವಿನಂತಿಸಿದ್ದೇನೆ. ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ನಿಷೇಧದಿಂದ ಉಲ್ಲು ಅಪ್ಲಿಕೇಶನ್ ಮತ್ತು ಆಲ್ಟ್ ಬಾಲಾಜಿಯಂತಹ ಅಪ್ಲಿಕೇಶನ್‌ಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ವಿಚಾರವನ್ನು ನಾನು ಸ್ಥಾಯಿ ಸಮಿತಿಯಲ್ಲಿ ಪ್ರಸ್ತಾಪಿಸಿದ್ದು, ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಚತುರ್ವೇದಿ ಅವರು ತಮ್ಮ ಎಕ್ಸ್​ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಬಹುತೇಕ ಕಂಟೆಂಟ್​ಗಳು "ವಿಕೃತ" ಮಟ್ಟಕ್ಕೆ ಹೋಗಬಹುದು. ಇಂತಹ ವೇದಿಕೆಗಳು ಕೂಡ "ಸಾಮಾಜಿಕ ಜವಾಬ್ದಾರಿ"ಯನ್ನು ಹೊಂದಿವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ ಕೆಲವೇ ದಿನಗಳಲ್ಲಿ ಈ ವಿಡಿಯೋ ಕ್ಲಿಪ್​ ಹೊರಬಿದ್ದಿದೆ. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಆಲ್ಟ್‌ಬಾಲಾಜಿ, ಉಲ್ಲು ಡಿಜಿಟಲ್, ಮುಬಿ ಮತ್ತು ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್ ಕಾರ್ಪ್, ಗೂಗಲ್, ಮೆಟಾ ಇಂಕ್ ಮತ್ತು ಆ್ಯಪಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net