ಕಣ್ಣಿನ ಮೇಲೆ ಬ್ಯಾಂಡೇಜ್​... ಏನಾಯ್ತು ಹಾರ್ದಿಕ್​ ಪಾಂಡ್ಯಗೆ? ನಿಜಕ್ಕೂ ಗ್ರೇಟ್​ ಮುಂಬೈ ಇಂಡಿಯನ್ಸ್​ ನಾಯಕ! Hardik Pandya

Hardik Pandya
Published on

Hardik Pandya : ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ​ ಇದೀಗ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಗುರುವಾರ (ಮೇ 02) ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 100 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಸತತ ಆರನೇ ಪಂದ್ಯವನ್ನು ಗೆದ್ದು ಪ್ಲೇಆಫ್​ಗೆ ಅರ್ಹತೆ ಪಡೆಯುವ ಪ್ರಮುಖ ತಂಡ ಎನಿಸಿಕೊಂಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 217 ರನ್ ಗಳಿಸಿತು. ಮುಂಬೈ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ, ರಯಾನ್ ರಿಕಲ್ಟನ್ (61 ರನ್​, 38 ಎಸೆತ, 7 ಬೌಂಡರಿ, 3 ಸಿಕ್ಸರ್‌) ಮತ್ತು ರೋಹಿತ್ ಶರ್ಮ (53 ರನ್​, 36 ಎಸೆತ, 9 ಬೌಂಡರಿ) ಅರ್ಧಶತಕಗಳನ್ನು ಗಳಿಸಿದರು. ಸೂರ್ಯಕುಮಾರ್ ಯಾದವ್ (48 ರನ್​, 23 ಎಸೆತ, 4 ಬೌಂಡರಿ, 3 ಸಿಕ್ಸರ್‌) ಮತ್ತು ಹಾರ್ದಿಕ್ ಪಾಂಡ್ಯ (48 ರನ್​, 23 ಎಸೆತ, 6 ಬೌಂಡರಿ, 1 ಸಿಕ್ಸರ್) ಮಿಂಚಿದರು. ಆರ್‌ಆರ್ ಬೌಲರ್‌ಗಳಲ್ಲಿ, ಮಹೇಶ್ ತೀಕ್ಷಣ್​ ಮತ್ತು ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಪಡೆದರು.

ನಂತರ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್​ 16.1 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಆರ್ ಪರ ಜೋಫ್ರಾ ಆರ್ಚರ್ (30) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮುಂಬೈ ಪರ ಟ್ರೆಂಟ್ ಬೌಲ್ಟ್ ಮತ್ತು ಕರಣ್ ಶರ್ಮಾ ತಲಾ ಮೂರು ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದರೆ, ದೀಪಕ್ ಚಾಹರ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ಕಣ್ಣಿಗೆ ಗಾಯ!

ಇದೇ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕಣ್ಣಿನ ಮೇಲ್ಭಾಗದಲ್ಲಿ ಬ್ಯಾಂಡೇಜ್​ ಹಾಕಿಕೊಂಡಿರುವುದು ಗಮನ ಸೆಳೆಯಿತು. ಅಷ್ಟಕ್ಕೂ ನಡೆದಿದ್ದೇನೆಂದರೆ, ಪಂದ್ಯಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ ಎಡಗಣ್ಣಿನ ಮೇಲೆ ಹಾರ್ದಿಕ್​ ಪಾಂಡ್ಯ ಗಾಯ ಮಾಡಿಕೊಂಡರು. ಅವರಿಗೆ ಏಳು ಹೊಲಿಗೆಗಳನ್ನು ಹಾಕಲಾಗಿದೆ.

ಗಾಯದ ಹೊರತಾಗಿಯೂ, ಹಾರ್ದಿಕ್ ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೆ ಪಂದ್ಯವನ್ನು ಆಡಲು ನಿರ್ಧರಿಸಿದರು. ಗಾಯದ ಸುತ್ತಲೂ ಬಿಳಿ ಟೇಪ್ ಹಾಕಿಕೊಂಡು ಪಂದ್ಯವನ್ನು ಆಡಿದರು. ನಾಯಕನಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಬಗ್ಗೆ ತಿಳಿದಿರುವ ಅಭಿಮಾನಿಗಳು ಮತ್ತು ನೆಟ್ಟಿಗರು ಮುಂಬೈ ಇಂಡಿಯನ್ಸ್ ತಂಡದ ಮೇಲೆ ಹಾರ್ದಿಕ್​ಗೆ ಇರುವ ಬದ್ಧತೆಯನ್ನು ಮೆಚ್ಚಿಕೊಂಡಿದ್ದಾರೆ.

ಅಂದಹಾಗೆ, ರಾಜಸ್ಥಾನ ವಿರುದ್ಧದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು ಮತ್ತು ಪ್ಲೇಆಫ್‌ಗೆ ಹತ್ತಿರವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net