10 ಕೋಟಿ ಎಲ್ಲಿ? 2 ಲಕ್ಷ ರೂ. ಎಲ್ಲಿ? ತನ್ನ ಮೇಲಿನ ಆರೋಪಗಳಿಗೆ ಕಡೆಗೂ ಉತ್ತರಿಸಿದ ಮಮತಾ ಕುಲಕರ್ಣಿ | Mamta Kulkarni

ವಿಜಯವಾಣಿ - 2025-02-03T120730.788
Published on

Mamta Kulkarni: ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ 90ರ ದಶಕದಲ್ಲಿ ಬಾಲಿವುಡ್​ ಅಂಗಳದಲ್ಲಿ ಮಿಂಚಿ ಕಣ್ಮರೆಯಾಗಿದ್ದ ಹಾಟ್​ ಬ್ಯೂಟಿ ಮಮತಾ ಕುಲಕರ್ಣಿ (52), 25 ವರ್ಷಗಳ ನಂತರ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ, ಸನ್ಯಾಸಿನಿ ಆಗಲು ಇಚ್ಚಿಸಿದ್ದು ಅವರ ಅಭಿಮಾನಿಗಳನ್ನು ಅಕ್ಷರಶಃ ಅಚ್ಚರಿಗೆ ದೂಡಿತ್ತು. ದೀಕ್ಷೆ ಪಡೆದ ಬೆನ್ನಲ್ಲೇ ಹೊಸ ಹೆಸರನ್ನೂ ಪಡೆದಿದ್ದ ನಟಿ, ಈಗ ದಿಢೀರ್​ ಕಿನ್ನರ ಅಖಾಡದಿಂದ ಉಚ್ಛಾಟನೆಗೊಂಡ ಸುದ್ದಿ ಕೂಡ ಅವರ ಅಭಿಮಾನಿಗಳಲ್ಲಿ ಅಷ್ಟೇ ಅಚ್ಚರಿಯನ್ನು ಉಂಟುಮಾಡಿದೆ.

ಸ್ಥಾನಕ್ಕಾಗಿ 10 ಕೋಟಿ ರೂ.

ಕಿನ್ನರ ಅಖಾಡದ ಮಹಾಮಂಡಲೇಶ್ವರರಾಗಿ ನೇಮಕಗೊಂಡಿದ್ದ ಮಮತಾ ಕುಲಕರ್ಣಿ, ಈ ಹಿಂದೆ ಕ್ರಿಮಿನಲ್​ ಕೇಸ್​ನಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಜ.31ರಂದು, ಕಿನ್ನರ ಅಖಾಡದ ಸಂಸ್ಥಾಪಕ ರಿಷಿ ಅಜಯ್ ದಾಸ್ ಮಾತನಾಡಿ, "ಯಾವುದೇ ಧಾರ್ಮಿಕ ಅಥವಾ ಅಖಾಡ ಸಂಪ್ರದಾಯವನ್ನು ಅನುಸರಿಸದವರಿಗೆ ನೇರವಾಗಿ ಮಹಾಮಂಡಲೇಶ್ವರದ ಬಿರುದು ಮತ್ತು ಪಟ್ಟವನ್ನು ನೀಡಲಾಯಿತು. ಆದ್ದರಿಂದ, ದೇಶ, ಸನಾತನ ಧರ್ಮ ಮತ್ತು ಸಮಾಜದ ಹಿತದೃಷ್ಟಿಯಿಂದ ಮಮತಾಳನ್ನು ಹುದ್ದೆಯಿಂದ ತೆಗೆದುಹಾಕಲು ನಾನೇ ಒತ್ತಾಯಿಸಿದೆ" ಎಂದು ಹೇಳಿದರು.

ಪಟ್ಟದಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ತನ್ನ ಮೇಲೆ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಮತಾ, ಮಹಾಮಂಡಲೇಶ್ವರ ಸ್ಥಾನ ಪಡೆಯಲು ನಾನು 10 ಕೋಟಿ ರೂ. ಕೊಟ್ಟಿದ್ದೇನೆ ಎಂದು ನನ್ನ ವಿರುದ್ಧ ಹೇಳ್ತಿದ್ದಾರೆ. ನನ್ನ ಬಳಿ 1 ಕೋಟಿ ರೂ. ಹಣವೇ ಇಲ್ಲ. ಇನ್ನೂ 10 ಕೋಟಿ ರೂ. ಮಾತೆಲ್ಲಿ? ಸರ್ಕಾರ ನನ್ನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ನಾನು ಹೇಗೆ ಬದುಕುತ್ತಿದ್ದೇನೆ ಎಂಬ ಸಣ್ಣ ಸುಳಿವೂ ನಿಮಗಿಲ್ಲ. ನಿಜಕ್ಕೂ ನನ್ನ ಬಳಿ ಹಣವಿಲ್ಲ. ಅಸಲಿಗೆ ನಾನು ಯಾರೊಬ್ಬರಿಂದಲೋ 2 ಲಕ್ಷ ರೂ. ಸಾಲ ಪಡೆದು, ಅದನ್ನು ನನ್ನ ಗುರುಗಳಿಗೆ ದಕ್ಷಿಣೆಯಾಗಿ ಅರ್ಪಿಸಿದ್ದೇನೆ. ಇದರ ಬಗ್ಗೆ ಯಾರಿಗಾದರೂ ಗೊತ್ತಿದೆಯೇ? ಎಂದು ಕಿಡಿಕಾರಿದರು.

ಬಾಲಿವುಡ್​ ಬಿಚ್ಚುನುಡಿ

25 ವರ್ಷಗಳಿಂದ ಭಾರತದತ್ತ ತಿರುಗಿ ನೋಡದ ಹಾಟ್​ ಬ್ಯೂಟಿ, 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ. ಅಂದು ಬಾಲಿವುಡ್​ ಅಂಗಳದಲ್ಲಿ ಉತ್ತುಂಗದಲ್ಲಿದ್ದ ಮಮತಾ, ಉದ್ಯಮದಲ್ಲಿ ತಮ್ಮದೇ ಆದ ಹೆಸರನ್ನು ಸ್ಥಾಪಿಸಿಕೊಂಡಿದ್ದರು. ಯಾರ ಹೇಳಿಕೆಗೂ, ಟೀಕೆಗೂ ಬಗ್ಗದ ನಟಿ, ತಮ್ಮ ನೇರನುಡಿ, ಮುಕ್ತ ಮನಸ್ಸಿನ ಮಾತುಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರು. ಜಾಲತಾಣದ ಅಸ್ತಿತ್ವವಿಲ್ಲದ ಆ ಸಮಯದಲ್ಲೇ ಸಂದರ್ಶನಗಳಲ್ಲಿ ಆಕೆ ಕೊಡುತ್ತಿದ್ದ ಒಂದೊಂದು ಹೇಳಿಕೆಗೆಳು ಇಡೀ ಚಿತ್ರರಂಗವನ್ನೇ ನಡುಗಿಸುತ್ತಿತ್ತು. ಸ್ಟಾರ್​ ನಟ-ನಟಿಯರ ಬಗ್ಗೆ ಮಮತಾ ಕುಲಕರ್ಣಿ ಬಿಚ್ಚುನುಡಿಗಳು ಅಂದು ಭಾರೀ ಸಂಚಲನ ಸೃಷ್ಟಿಸುತ್ತಿತ್ತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net