65ರ ವಯಸ್ಸಲ್ಲೂ ಪದ್ಮಾಸನ ಭಂಗಿಯಲ್ಲೇ 1.4 ಕಿಮೀ ಈಜಿ ದಾಖಲೆ ಬರೆದ ಸಾಹಸಿ!

Gangadhar Kadekar
Published on

ಉಡುಪಿ: ಛಲ ಮತ್ತು ಶ್ರದ್ಧೆ ಇದ್ದರೆ ಸಾಧನೆಗೆ ವಯಸ್ಸು ಅಡ್ಡಿ ಆಗದು ಎಂದುದು ಅಕ್ಷರಶಃ ಸತ್ಯ. 65 ವರ್ಷದ ವೃದ್ಧರೊಬ್ಬರು ತನ್ನ ವಯಸ್ಸನ್ನೂ ಲೆಕ್ಕಿಸದೆ ಕಾಲಿಗೆ ಸರಪಳಿ ಸುತ್ತಿಕೊಂಡು ಪದ್ಮಾಸನ ಭಂಗಿಯಲ್ಲಿ ಒಂದು ಕಿಲೋಮೀಟರ್​ಗೂ ಹೆಚ್ಚು ದೂರ ಮಲ್ಪೆ ಪಡುಕೆರೆ ಬೀಚ್​ನಲ್ಲಿ ಈಜಿ ದಾಖಲೆ ನಿರ್ಮಿಸಿದ್ದಾರೆ.

ಆ ಸಾಹಸಿಯೇ ಗಂಗಾಧರ ಜಿ.ಕಡೇಕಾರ್. ಖ್ಯಾತ ಈಜುಪಟು, ಯೋಗಪಟು ಆಗಿರುವ ಗಂಗಾಧರ ಜಿ.ಕಡೇಕಾರ್ ಅವರು ಮಲ್ಪೆ ಪಡುಕೆರೆ ಬೀಚ್​ನಲ್ಲಿ ಈ ಸಾಹಸ ಮೆರೆದಿದ್ದಾರೆ. ಭಾನುವಾರ ಬೆಳಗ್ಗೆ 8:34ಕ್ಕೆ ಗಂಗಾಧರ ಜಿ.ಕಡೇಕಾರ್​ರ ಕಾಲಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸರಪಳಿ ಕಟ್ಟಿ ಬೀಗ ಹಾಕಿದರು. ಸರಿಯಾಗಿ 8:36ಕ್ಕೆ ಗಂಗಾಧರ ಅವರ ಸಾಹಸಮಯ ಈಜು ಆರಂಭಗೊಂಡಿತು. 9:37ಕ್ಕೆ ಗುರಿ ಮುಟ್ಟುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸಾಧನೆಯನ್ನು ದಾಖಲಿಸಿದರು.

ಒಂದು ಗಂಟೆ ಒಂದು ನಿಮಿಷಗಳಲ್ಲಿ ಒಂದು ಸಾವಿರದ ಇನ್ನೂರು ಮೀಟರ್, ಜತೆಗೆ ಹೆಚ್ಚುವರಿ ಇನ್ನೂರು ಮೀಟರ್ ಕ್ರಮಿಸಿ ಗಂಗಾಧರ ಜಿ.ಕಡೇಕಾರ್ ವಿಶಿಷ್ಟ ದಾಖಲೆ ಬರೆದಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರತಿನಿಧಿಗಳು ಹಾಜರಿದ್ದರು. ಶಾಸಕ ಕೆ.ರಘುಪತಿ ಭಟ್, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,‌ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಿ ಗಂಗಾಧರ್ ಕಡೇಕಾರ್​ಗೆ ಶುಭ ಕೋರಿದರು. ಮಲ್ಪೆ ಪಡುಕೆರೆ, ಕಡೆಕಾರಿನ ನೂರಾರು ನಿವಾಸಿಗಳು ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net