

Ramayana: ಕನ್ನಡ ಚಿತ್ರರಂಗದ ನಟ ಯಶ್, ಬಾಲಿವುಡ್ ಹೀರೋ ರಣಬೀರ್ ಕಪೂರ್, ತಮಿಳು ನಟಿ ಸಾಯಿ ಪಲ್ಲವಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ತುಣುಕು ಇತ್ತೀಚೆಗಷ್ಟೇ ತೆರೆಕಂಡಿದೆ. ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಮೇಲಿನ ನಿರೀಕ್ಷೆಗಳು ಇದೀಗ ದುಪ್ಪಟ್ಟಾಗಿವೆ.
ಜುಲೈ 03ರಂದು ಬಿಡುಗಡೆಯಾದ ರಾಮಾಯಣ ಗ್ಲಿಂಪ್ಸ್ ಕಂಡ ಚಿತ್ರಪ್ರೇಮಿಗಳು ನಿತೀಶ್ ತಿವಾರಿ ಅವರ ಮೇಕಿಂಗ್ಗೆ ಫಿದಾ ಆಗಿದ್ದಾರೆ. ದೃಶ್ಯಗಳು, ಗ್ರಾಫಿಕ್ಸ್, ವಿಎಫ್ಎಕ್ಸ್ ಕೆಲಸಗಳು ಮತ್ತು ತಾರಾಬಳಗ ನೋಡುಗರನ್ನು ಸೆಳೆದಿವೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ತೆರಗೆ ಬರಲು ಸಿದ್ಧವಾಗಿದೆ ಎಂಬ ಮಾಹಿತಿ ಸಿನಿಪ್ರಿಯರಲ್ಲಿ ಇನ್ನಷ್ಟು ಕೌತುಕ ಹೆಚ್ಚಿಸಿದೆ.
ಇದೆಲ್ಲದರ ನಡುವೆ 2025ರಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ನಟಿ ಶೋಭನಾ ಕೂಡ ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಕುರಿತು ಸ್ವತಃ ನಟಿಯೇ ಮಾಹಿತಿ ಹಂಚಿಕೊಂಡಿದ್ದು, ನಿತೀಶ್ ತಿವಾರಿ ಅವರ ಬಹುನಿರೀಕ್ಷಿತ ಚಿತ್ರದ ಭಾಗವಾಗಲು ಬಹಳ ಖುಷಿ ಮತ್ತು ಹೆಮ್ಮೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಂಡಿರುವ ನಟಿ, ಇತ್ತೀಚೆಗಷ್ಟೇ ತೆರೆಕಂಡ ಮೋಹನ್ ಲಾಲ್ ಅಭಿನಯದ 'ಥುಡರುಮ್' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ.
ಶೋಭನಾ ಅವರ ಎಂಟ್ರಿಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದು, ರಾಮಾಯಣ ಚಿತ್ರದಲ್ಲಿ ನಿಮ್ಮ ಎಂಟ್ರಿ ಬಹಳ ಖುಷಿ ತಂದಿದೆ. ಬಹುದೊಡ್ಡ ಪ್ರಾಜೆಕ್ಟ್ನಲ್ಲಿ ದೊಡ್ಡ ದೊಡ್ಡ ಕಲಾವಿದರೇ ಭಾಗಿಯಾಗಿರುವುದು ನಿಜಕ್ಕೂ ಅದ್ಭುತ ಎಂದಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಭಾಗವಾಗಿರುವ ಶೋಭನಾ, ರಾವಣನ ತಾಯಿ ಕೈಕಸಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ,(ಏಜೆನ್ಸೀಸ್).