ಬಯೋಕಾನ್​ನ ಕಿರಣ್​ ಮಜುಮ್​ದಾರ್ ಟೀಕೆಗೆ ಸಿಎಂ ಸಿದ್ದರಾಮಯ್ಯ ಖಡಕ್ ತಿರುಗೇಟು | Siddaramaiah

ವಿಜಯವಾಣಿ (2)
Published on

Siddaramaiah: ಕಳೆದ ಒಂದು ತಿಂಗಳಲ್ಲಿ ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಹೃದಯಾಘಾತಕ್ಕೆ ಜನರು ಬಲಿಯಾಗುತ್ತಿದ್ದಾರೆ. ಕೇವಲ ಹಾಸನದಲ್ಲೇ 24ಕ್ಕೂ ಅಧಿಕ ಮಂದಿ ಹಾರ್ಟ್​ ಅಟ್ಯಾಕ್​ಗೆ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಾಗ ಕೋವಿಡ್​ ಲಸಿಕೆ ಅಡ್ಡಪರಿಣಾಮಗಳು ಇರಬಹುದು ಎನ್ನಲಾಯಿತು. ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಡಿದ್ದ ಪೋಸ್ಟ್​ ಈಗ ಟೀಕೆ, ತಿರುಗೇಟಿಗೆ ಕಾರಣವಾಗಿದೆ.

ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದ ಸಿಎಂ, "ರಾಜ್ಯದ ಯುವಜನರಲ್ಲಿ ಹಠಾತ್ ಸಾವುಗಳಿಗೆ ಕಾರಣಗಳು ಮತ್ತು ಕೋವಿಡ್ ಲಸಿಕೆಗಳು ಯಾವುದಾದರೂ ರೀತಿಯಲ್ಲಿ ಅಡ್ಡಪರಿಣಾಮ ಬೀರಿರಬಹುದೇ ಎಂಬುದರ ಕುರಿತು ಸಮಗ್ರ ಅಧ್ಯಯನ ನಡೆಸಲು ಸಮಿತಿಗೆ ಆದೇಶ ನೀಡಲಾಯಿತು" ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದರು. ಇದನ್ನು ರಿಟ್ವೀಟ್​ ಮಾಡಿದ ಬಯೋಕಾನ್​ನ ಕಿರಣ್​ ಮಜುಮ್​ದಾರ್, ಈ ವಿಷಯದಲ್ಲಿ ಕೋವಿಡ್​ ಲಸಿಕೆಯನ್ನು ಎಳೆದು ತಂದಿದ್ದಕ್ಕೆ ಮುಖ್ಯಮಂತ್ರಿಗಳನ್ನು ಟೀಕಿಸಿದ್ದರು.

ಕಿರಣ್​ ಟೀಕೆ ಏನು?

"ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್​-19 ಲಸಿಕೆಗಳನ್ನು ತುರ್ತು ಬಳಕೆಯ ಅಧಿಕಾರ ಚೌಕಟ್ಟಿನಡಿಯಲ್ಲಿ ಅನುಮೋದಿಸಲಾಗಿದೆ. ಸುರಕ್ಷತೆ ಮತ್ತು ಪರಿಣಾಮಕಾರಿಯಾಗಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕಠಿಣ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ. ಈ ಲಸಿಕೆಗಳನ್ನು ಆತುರದಲ್ಲಿ ಅನುಮೋದಿಸಲಾಗಿದೆ ಎಂದು ಸೂಚಿಸುವುದು ವಾಸ್ತವಿಕವಾಗಿ ತಪ್ಪು ಮತ್ತು ಹೀಗೆ ಹೇಳುವುದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ" ಎಂದರು.

"ಈ ಲಸಿಕೆಗಳು ಲಕ್ಷಾಂತರ ಜೀವಗಳನ್ನು ಉಳಿಸಿವೆ ಮತ್ತು ಎಲ್ಲಾ ಲಸಿಕೆಗಳಂತೆ, ಬಹಳ ಕಡಿಮೆ ಸಂಖ್ಯೆಯ ವ್ಯಕ್ತಿಗಳಲ್ಲಿ ಅಡ್ಡಪರಿಣಾಮಗಳನ್ನು ಉಂಟುಮಾಡಿರಬಹುದು. ಮೇಲ್ನೋಟದಲ್ಲಿ ದೂಷಿಸುವ ಬದಲು ಅವುಗಳ ಅಭಿವೃದ್ಧಿಯ ಹಿಂದಿನ ವಿಜ್ಞಾನ ಮತ್ತು ಡೇಟಾ ಕುರಿತ ಮಾಹಿತಿ, ವರದಿಗಳನ್ನು ಒಪ್ಪಿಕೊಳ್ಳುವುದು ಮುಖ್ಯ" ಎಂದು ಟೀಕಿಸಿದ್ದರು.

ಸಿಎಂ ತಿರುಗೇಟು

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, "ತಮ್ಮ ಪ್ರೀತಿಪಾತ್ರರನ್ನು ಅನಿರೀಕ್ಷಿತವಾಗಿ ಕಳೆದುಕೊಂಡ ಜನರ ನೋವಿಗೆ ಸ್ಪಂದಿಸುವ ಕರ್ತವ್ಯ ನನ್ನ ಮೇಲಿದೆ. ಪೋಷಕರು ತಮ್ಮ ಮಕ್ಕಳು ಅಥವಾ ಕುಟುಂಬದವರನ್ನು ಕಳೆದುಕೊಂಡಾಗ, ಅದರ ಹಿಂದಿರುವ ಕಾರಣವನ್ನು ಹುಡುಕುವುದು ಅಥವಾ ಸ್ಪಷ್ಟತೆ ಪಡೆಯುವುದು ತಪ್ಪಲ್ಲ. ಜಾಗತಿಕವಾಗಿ, ಕೋವಿಡ್​ ಲಸಿಕೆಗಳು ಅನೇಕ ಜೀವಗಳನ್ನು ಉಳಿಸಿರಬಹುದು. ಹೃದಯಾಘಾತದಲ್ಲಿ ಕೋವಿಡ್ ಲಸಿಕೆಯ​ ಅಡ್ಡಪರಿಣಾಮಗಳು ಕಾರಣವಾಗಿರಬಹುದು ಎನ್ನುವುದಕ್ಕೆ ಒಂದಷ್ಟು ಅಧ್ಯಯನಗಳ ಉಲ್ಲೇಖವಿದೆ" ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net