ನ.14ಕ್ಕೆ ಬಿಡುಗಡೆಯಾಗಲಿದೆ 'ದಿ ಜರ್ನಿ ಆಫ್​ ಗಂಧದ ಗುಡಿ'

Gandhadagudi - Final 1
Published on

ಬೆಂಗಳೂರು: ಪುನೀತ್​ ಅಭಿನಯದ ಕೊನೆಯ ಚಿತ್ರ 'ಗಂಧದ ಗುಡಿ' ಈಗಾಗಲೇ ಬಿಡುಗಡೆಯಾಗಿ ಎಲ್ಲಡೆಯಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರವನ್ನು ಹೇಗೆ ಮಾಡಿರಬಹುದು ಎಂಬ ಕುತೂಹಲ ಪ್ರೇಕ್ಷಕರಿಗೆ ಇರಬಹುದು. ಆ ಕುತೂಹಲವನ್ನು ತಣಿಸುವುದಕ್ಕೆಂದೇ ಇದೀಗ ನ. 14ರಂದು ಚಿತ್ರದ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಲಾಗುತ್ತಿದೆ.

ಹೌದು, 'ಗಂಧದ ಗುಡಿ' ಚಿತ್ರ ಹೇಗೆ ಶುರುವಾಯ್ತು, ಹೇಗೆ ಮತ್ತು ಎಲ್ಲೆಲ್ಲಿ ಚಿತ್ರೀಕರಣವಾಯ್ತು, ಚಿತ್ರೀಕರಣದ ಅನುಭವಗಳು ಹೇಗಿತ್ತು ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ಈ ಮೇಕಿಂಗ್​ ವಿಡಿಯೋ ನ. 14ರಂದು ಯೂಟ್ಯೂಬ್​ನ ಪಿಆರ್​ಕೆ ಆಡಿಯೋದಲ್ಲಿ ಬಿಡುಗಡೆಯಾಗಲಿದ್ದು, ಮುಂಚಿತವಾಗಿ ಇಂದು ಪ್ರೋಮೋ ಬಿಡುಗಡೆಯಾಗಿದೆ.

ಅಪ್ಪುವಿನ ಕನಸಾದ 'ಗಂಧದ ಗುಡಿ'ಯ ಎಕ್ಸ್​ಕ್ಲೂಸಿವ್​ ತೆರೆಮರೆಯ ದೃಶ್ಯಗಳನ್ನು ಅನುಭವಿಸಿ ಎಂದು ಈ ಪ್ರೋಮೋದಲ್ಲಿ ಅಶ್ವಿನಿ ಪುನೀತ್​ ರಾಜಕುಮಾರ್​ ಈ ಪ್ರೋಮೋದಲ್ಲಿ ತಿಳಿಸಿದ್ದಾರೆ.

'ಗಂಧದ ಗುಡಿ' ಬಗ್ಗೆ ಈ ಹಿಂದೆ ಮಾತನಾಡಿದ್ದ ಚಿತ್ರದ ನಿರ್ದೇಶಕ ಅಮೋಘವರ್ಷ, 'ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬೇರೆಬೇರೆ ಶೈಲಿಯ ಒಳ್ಳೆಯ ಕಂಟೆಂಟ್​ ಇರುವ ಸಿನಿಮಾಗಳು ಬರುತ್ತಿವೆ. ಇದು ಸಹ ವಿಭಿನ್ನವಾದ ಚಿತ್ರ. ಇದೊಂದು ಚಿತ್ರ ಎನ್ನುವುದಕ್ಕಿಂತ ಇದೊಂದು ಅನುಭವ ಎಂದರೆ ತಪ್ಪಿಲ್ಲ. 'ಗಂಧದ ಗುಡಿ'ಯನ್ನು ಅಪ್ಪು ಅವರ ಕಣ್ಣಲ್ಲಿ ನೋಡುವ ಒಂದು ವಿಭಿನ್ನವಾದ ಅನುಭವ. ಈ ಫಾರ್ಮಾಟ್​ಗೆ ಏನು ಹೆಸರಿಡಬೇಕು ಅಂತ ನನಗೆ ನಿಜವಾಗಲೂ ಗೊತ್ತಿಲ್ಲ. ಈ ತರಹದ ಫಾರ್ಮೆಟ್​ನ ಚಿತ್ರವನ್ನು ನಾನು ಇದುವರೆಗೂ ಎಲ್ಲೂ ನೋಡಿಲ್ಲ' ಎಂದು ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net