

ಹಿಂದಿ ಹಾಗೂ ಮರಾಠಿ ಚಿತ್ರರಂಗಗಳಲ್ಲಿ ನಟ, ನಿರ್ದೇಶಕ, ನಿರ್ವಪಕ ಮಹೇಶ್ ಮಂಜ್ರೇಕರ್ ದೊಡ್ಡ ಹೆಸರು. ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಫಿಲಂಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಮಹೇಶ್ ಮಂಜ್ರೇಕರ್, ಹಿಂದಿ, ಮರಾಠಿ ಜತೆಗೆ ಕನ್ನಡ, ತಮಿಳು, ತೆಲುಗು, ಬಂಗಾಲಿ, ಭೋಜ್ಪುರಿ ಮಾತ್ರವಲ್ಲ ಇಂಗ್ಲೀಷ್ ಚಿತ್ರಗಳಲ್ಲೂ ನಟಿಸಿದ್ದಾರೆ. ‘ಬಿಗ್ ಬಾಸ್’ ಮರಾಠಿ ಕಾರ್ಯಕ್ರಮ ವನ್ನು ನಿರೂಪಣೆ ಮಾಡುತ್ತಿದ್ದಾರೆ. ಇಂತಹ ಮಹೇಶ್ ಇತ್ತೀಚೆಗಷ್ಟೇ ಮುಂಬೈನಲ್ಲಿ ಏಳು ಮರಾಠಿ ಚಿತ್ರಗಳ ಲಾಂಚ್ ಕಾರ್ಯಕ್ರಮದಲ್ಲಿ ‘ಕೆಜಿಎಫ್’ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
‘ಮರಾಠಿ ಚಿತ್ರರಂಗವೂ ಶ್ರೇಷ್ಠ ಎಂದು ಕೂಗಿ ಕೂಗಿ ಹೇಳಬೇಕಾದ ಪರಿಸ್ಥಿತಿಯಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿತ್ತು. ಆದರೆ, ಒಬ್ಬ ವ್ಯಕ್ತಿ ಅದ್ದೂರಿ ಬಜೆಟ್ನಲ್ಲಿ ದೊಡ್ಡ ಸಿನಿಮಾ ಮಾಡುವ ಆಲೋಚನೆ ಮಾಡಿದರು. ‘ಕೆಜಿಎಫ್’ ಮೂಲಕ ಇತಿಹಾಸ ನಿರ್ವಿುಸಿದರು. ಅವರು ‘ಕೆಜಿಎಫ್’ ಚಿತ್ರಗಳನ್ನು ಹಿಂದಿಯಲ್ಲಿ ಮಾಡಲಿಲ್ಲ. ಕನ್ನಡದಲ್ಲಿ ಸಿನಿಮಾ ಮಾಡಿ, ಹಿಂದಿಗೆ ಡಬ್ ಮಾಡಿ ಪ್ರೇಕ್ಷಕರ ತಲೆಯ ಮೇಲೆ ಎಸೆದರು. ಅವರನ್ನು ನೋಡಿದರೆ ನನಗೆ ಹೊಟ್ಟೆಕಿಚ್ಚು. ಅವರಂತೆಯೇ ನಾನೂ ಏನಾದರೂ ಮಾಡಬೇಕೆಂಬ ಆಸೆಯಿದೆ. ‘ಕೆಜಿಎಫ್’ ನಿರ್ವಪಕರಂತೆಯೇ ನಮ್ಮಲ್ಲೂ ನಿರ್ವಪಕರು ನಂಬಬೇಕು. ‘ಕೆಜಿಎಫ್ 2’ ಬರೋಬ್ಬರಿ ಒಂದು ಸಾವಿರ ಕೋಟಿ ರೂ. ಗಳಿಕೆ ಮಾಡಿಕೊಂಡಿತು’ ಎಂದು ಕನ್ನಡದ ‘ಕೆಜಿಎಫ್’ ಚಿತ್ರದ ಗುಣಗಾನ ಮಾಡಿದ್ದಾರೆ. - ಏಜೆನ್ಸೀಸ್