

ಹೈದರಾಬಾದ್: ಟಾಲಿವುಡ್ನಲ್ಲಿ ಮಹೇಶ್ ಬಾಬು ನಟಿಸಲಿರುವ ಸರ್ಕಾರು ವಾರಿ ಪಾಟ ಸಿನಿಮಾ ಸದ್ಯ ಫಸ್ಟ್ ಲುಕ್ ಮೂಲಕವೇ ಕುತೂಹಲ ಮೂಡಿಸಿದೆ. ತಂದೆ ಕೃಷ್ಣ ಅವರ ಜನ್ಮ ದಿನದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಚಿತ್ರಕ್ಕೆ ನಾಯಕಿ ಯಾರೆಂಬುದು ಅಂತಿಮವಾಗಿದೆ.
ಪರಸುರಾಮ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ನಾಯಕಿಯಾಗಿ ಕೀರ್ತಿ ಸುರೇಶ್ ಆಯ್ಕೆಯಾಗಿದ್ದಾರೆ. ವಿಶೇಷ ಏನೆಂದರೆ, ಇಂದು ಕೀರ್ತಿ ಬರ್ತ್ಡೇ. ಈ ಶುಭ ದಿನದಂದೇ ಚಿತ್ರತಂಡ ಅವರನ್ನು ಸ್ವಾಗತಿಸಿದೆ.
ದ್ವಿಪಾತ್ರದಲ್ಲಿ ಮಹೇಶ್ ಬಾಬು ನಟಿಸಲಿದ್ದು, ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ಇಡೀ ತಂಡ ತೊಡಗಿಸಿಕೊಂಡಿದೆ. ಚಿತ್ರದ ಬಹುಪಾಲು ಶೂಟಿಂಗ್ ಅಮೆರಿಕದಲ್ಲಿ ನಡೆಯಲಿದ್ದು, ಸೀಮಿತ ತಂಡದವರೊಂದಿಗೆ ಈ ವರ್ಷಾಂತ್ಯಕ್ಕೆ ಅಮೆರಿಕದತ್ತ ಪ್ರಯಾಣ ಬೆಳೆಸಲಿದೆ.
ಇತ್ತ ರಜನಿಕಾಂತ್ ಜತೆಗೆ ಅನ್ನಾಟೆ ಸಿನಿಮಾದಲ್ಲಿ ಕೀರ್ತಿ ನಟಿಸುತ್ತಿದ್ದು, ನಿತಿನ್ ಜತೆಗಿನ ರಂಗ್ ದೇ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ. ಮಲಯಾಳಂನ ಮರಕ್ಕರ್ ಚಿತ್ರ ಬಿಡುಗಡೆಗೂ ಸಜ್ಜಾಗಿದೆ. ಇದೀಗ ಮಹೇಶ್ ಬಾಬು ಚಿತ್ರಕ್ಕೂ ಸಹಿ ಹಾಕಿದ್ದಾರೆ. (ಏಜೆನ್ಸೀಸ್)