

ಬೆಂಗಳೂರು: ಚಿರಂಜೀವಿ ಅಭಿನಯದ 'ಶಿವಾರ್ಜುನ' ಚಿತ್ರವು ಶುಕ್ರವಾರ ಸಂತೋಷ್ ಸೇರಿದಂತೆ ರಾಜ್ಯದ್ಯಂತ ಹಲವು ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ನಾಳೆ ಅಂದರೆ ಅಕ್ಟೋಬರ್ 17ರ ಶನಿವಾರದಂದು ಚಿತ್ರವನ್ನು ಇನ್ನಷ್ಟು ಪ್ರಮೋಟ್ ಮಾಡುವ ಸಲುವಾಗಿ ಚಿರಂಜೀವಿ ಅವರ ಸಹೋದರ ಧ್ರುವ, ಸಂತೋಷ್ ಚಿತ್ರಮಂದಿರಕ್ಕೆ ಭೇಟಿ ಕೊಡಲಿದ್ದಾರೆ. ಲಾಕ್ಡೌನ್ ಶುರುವಾಗುವುದಕ್ಕಿಂತ ಒಂದು ದಿನ ಮುನ್ನ, 'ಶಿವಾರ್ಜುನ' ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲೂ ಚಿತ್ರವನ್ನು ವೀಕ್ಷಿಸುವುದಕ್ಕೆ ಧ್ರುವ ಸರ್ಜಾ ಬಂದಿದ್ದರು. ಈಗ ನಾಳೆ ಮತ್ತೊಮ್ಮೆ ಅವರು ಸಂತೋಷ್ಗೆ ಭೇಟಿ ಕೊಡಲಿದ್ದಾರೆ.
ಧ್ರುವ ಭೇಟಿ ಕೊಡುವುದಷ್ಟೇ ಅಲ್ಲ, ನಾಳೆ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬವಿರುವುದರಿಂದ, ಚಿತ್ರ ನೋಡುವುದಕ್ಕೆ ಬರುವ ಪ್ರೇಕ್ಷಕರಿಗೆ ಸಿಹಿ ಹಂಚುವುದಕ್ಕೆ ನಿರ್ಮಾಪಕ ಶಿವಾರ್ಜುನ್ ತೀರ್ಮಾನಿಸಿದ್ದು, ಅದಕ್ಕಾಗಿ ತಯಾರಿ ನಡೆಸಿದ್ದಾರೆ.
'ಶಿವಾರ್ಜುನ್' ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದು, ಚಿತ್ರದಲ್ಲಿ ಚಿರು ಜತೆಗೆ ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್, ತಾರಾ, ಕಿಶೋರ್, ಶಿವರಾಜ್ ಕೆ.ಆರ್. ಪೇಟೆ, ರವಿಕಿಶನ್ ಸೇರಿದಂತೆ ಹಲವರು ನಟಿಸಿದ್ದಾರೆ.