

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಅವತಾರವನ್ನು ಈಗಾಗಲೇ ನೋಡಿದ್ದೀರಿ. ಲಾಕ್ಡೌನ್ ಅವಧಿಯಲ್ಲಿ ಗಡ್ಡಧಾರಿಯಾಗಿಯೂ ಪುನೀತ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ, ಆ ಲುಕ್ ಯುವರತ್ನ ಚಿತ್ರದಲ್ಲಿ ಇರಲಿದೆಯೇ?
ಹೀಗೊಂದು ಪ್ರಶ್ನೆ ಕಳೆದ ಕೆಲ ತಿಂಗಳಿಂದ ಹರಿದಾಡುತ್ತಿದೆ. ಇದೀಗ ಅದೆಲ್ಲದಕ್ಕೂ ಚಿತ್ರತಂಡ ಉತ್ತರ ನೀಡಿದೆ. ಅಂದರೆ, ದಸರಾ ಹಬ್ಬದ ಪ್ರಯುಕ್ತ ಯುವರತ್ನ ಚಿತ್ರದಲ್ಲಿ ಪುನೀತ್ ಅವರ ಬಿಯರ್ಡ್ ಲುಕ್ ಅನಾವರಣ ಮಾಡಲು ತಂಡ ಪ್ಲಾನ್ ಮಾಡಿದೆ.
ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ಸ್ ಅಧಿಕೃತವಾಗಿ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲೂ ಸಹಜ ಕುತೂಹಲ ಮನೆ ಮಾಡಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿಕೊಂಡಿರುವ ಪುನೀತ್, ಸದ್ಯ ಹೊಸಪೇಟೆಯಲ್ಲಿ ನಡೆಯುತ್ತಿರುವ ‘ಜೇಮ್ಸ್’ ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ.