ನಾಳೆ ಚಿರು ಅಭಿಮಾನಿಗಳಿಗೆ ಡಬ್ಬಲ್​ ಧಮಾಕಾ!

Chiranjeevi - Final
Published on

ಬೆಂಗಳೂರು: ನಾಳೆ (ಅ 17) ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಚಿರು ಇದ್ದಿದ್ದರೆ, 34 ವರ್ಷ ಮುಗಿಸಿ, 35ಕ್ಕೆ ಕಾಲಿಡುತ್ತಿದ್ದರು. ಆದರೆ, ಅವರ ಅಗಲಿಕೆಯಿಂದಾಗಿ, ಈ ಬಾರಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸದಂತಾಗಿದೆ.

ಹಾಗಂತ ಅಭಿಮಾನಿಗಳು ಬೇಸರಪಡುವ ಅಗತ್ಯವಿಲ್ಲ. ಚಿರು ನೆನಪಲ್ಲಿ ಅವರ ಅಭಿನಯದ ಎರಡು ಚಿತ್ರತಂಡಗಳಿಂದ ಅಭಿಮಾನಿಗಳಿಗೆ ಡಬ್ಬಲ್​ ಧಮಾಕಾ ಕಾದಿದೆ. ಈ ಪೈಕಿ, ಚಿರಂಜೀವಿ ಅಭಿನಯದ 'ಕ್ಷತ್ರಿಯ' ಚಿತ್ರದ ಟೀಸರ್ ಬಿಡುಗಡೆಯಾದರೆ, 'ರಾಜಮಾರ್ತಾಂಡ' ಚಿತ್ರದ ನಾಯಕನ ಪರಿಚಯದ ಗೀತೆ ಬಿಡುಗಡೆಯಾಗುತ್ತಿದೆ.

ಈ ಪೈಕಿ 'ಕ್ಷತ್ರಿಯ' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಲಾಕ್​ಡೌನ್​ ಮುಗಿದು ಇನ್ನೇನು ಚಿತ್ರೀಕರಣ ಮುಗಿಸಬೇಕು ಎನ್ನುವಷ್ಟರಲ್ಲೇ ಚಿರಂಜೀವಿ ಸರ್ಜಾ ಇನ್ನಿಲ್ಲವಾದರು. ಚಿರು ಇಲ್ಲದ ಚಿತ್ರಕ್ಕೆ ತಾರ್ಕಿಕ ಅಂತ್ಯ ಹೇಗೆ ಕೊಡಬೇಕು ಎಂಬ ನಿಟ್ಟಿನಲ್ಲಿ ಚಿತ್ರತಂಡದವರ ನಡುವೆ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ, ನಾಳೆ ಮಧ್ಯಾಹ್ನ 12ಕ್ಕೆ ಚಿತ್ರದ ಟೀಸರ್​, ಆನಂದ್​ ಆಡಿಯೋದ ಯೂಟ್ಯೂಬ್​ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅನಿಲ್​ ಮಂಡ್ಯ ನಿರ್ದೇಶಿಸಿದ್ದು, ಎ. ವೆಂಕಟೇಶ್​ ನಿರ್ಮಿಸುತ್ತಿದ್ದಾರೆ.

ಇನ್ನು 'ರಾಜಮಾರ್ತಾಂಡ' ಚಿತ್ರದ ಒಂದು ಹಾಡನ್ನು ಹೊರತುಪಡಿಸಿ, ಮಿಕ್ಕಂತೆ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದರು ಚಿರು. ಈ ಚಿತ್ರದಲ್ಲಿನ ನಾಯಕನ ಪರಿಚಯಿಸುವ ಹಾಡು ಶನಿವಾರ ಬೆಳಿಗ್ಗೆ 8ಕ್ಕೆ ಬಿಡುಗಡೆಯಾಗಲಿದೆ. ಈ ಹಾಡು ಸಹ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ರಾಮ್​ನಾರಾಯಣ್​ ನಿರ್ದೇಶನ ಮಾಡಿದ್ದು, ಚಿರು ಭಾಗದ ದೃಶ್ಯಗಳಿಗೆ ಅವರ ಸಹೋದರ ಧ್ರುವ ಸರ್ಜಾ ಡಬ್ಬಿಂಗ್​ ಮಾಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net