ದೇವರಕೊಂಡ ಬೆನ್ನಿಗೆ ನಿಂತ ಮಹೇಶ್ ಬಾಬು ... ನನ್ನ ಸಪೋರ್ಟ್ ಇದೆ ಎಂದು ಪ್ರಿನ್ಸ್ ಹೇಳಿದ್ದೇಕೆ?

Mahesh Babu Final
Published on

ಲಾಕ್‌ಡೌನ್ ಸಮಯವನ್ನು ಹೆಂಡತಿ, ಮನೆ, ಮಕ್ಕಳು ಎಂದು ಮೀಸಲಿಟ್ಟಿದ್ದ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು, ಬಹಳ ದಿನಗಳ ನಂತರ ಸುದ್ದಿಯಲ್ಲಿದ್ದಾರೆ. ವಿಜಯ್ ದೇವರಕೊಂಡ ಬೆನ್ನಿಗೆ ನಿಂತಿರುವ ಟಾಲಿವುಡ್ ಪ್ರಿನ್ಸ್, ತಮ್ಮ ಸಂಪೂರ್ಣ ಬೆಂಬಲವನ್ನು ವಿಜಯ್‌ಗೆ ಕೊಟ್ಟಿದ್ದಾರೆ.

ಮಹೇಶ್ ಬಾಬು ಯಾಕೆ ದೇವರಕೊಂಡ ಬೆಂಬಲಕ್ಕೆ ಬರಬೇಕು ಎಂಬ ಪ್ರಶ್ನೆ ಇದ್ದರೆ, ಉತ್ತರ ಇಲ್ಲಿದೆ. ವಿಜಯ್ ದೇವರಕೊಂಡ ಬಗ್ಗೆ ಇತ್ತೀಚೆಗೆ ಫೇಕ್ ನ್ಯೂಸ್‌ಗಳು ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಅವರು ತಿರುಗಿಬಿದ್ದಿದ್ದಾರೆ. ಕೋವಿಡ್-19ಗೆ ದೇಣಿಗೆ ಕೊಡುವ ವಿಚಾರದಲ್ಲಿ ತಮ್ಮ ಬಗ್ಗೆ ಅವರ ಬಗ್ಗೆ ಅಪಪ್ರಚಾರವಾಗುತ್ತಿದ್ದು, ಸುಮ್ಮನೆ ಸುದ್ದಿ ಹಬ್ಬಿಸುತ್ತಿರುವ ಕೆಲವು ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಹರಿಹಾಯ್ದಿದ್ದಾರೆ. ‘ನೀವು ಬೇಕಾದರೆ ನನ್ನ ಕೆರಿಯರ್‌ನ ಹಾಳು ಮಾಡಬಹುದು, ಇಮೇಜ್‌ಗೆ ಧಕ್ಕೆ ತರಬಹುದು, ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಬಹುದು, ಏನು ಬೇಕಾದರೂ ಮಾಡಿಕೊಳ್ಳಬಹುದು’ ಎಂದು ಖಾರವಾಗಿ ಪ್ರತಿಕ್ರಯಿಸಿದ್ದಾರೆ. ಈ ವಿಷಯದಲ್ಲಿ ವಿಜಯ್‌ಗೆ ರಾಶಿ ಖನ್ನಾ, ರಾಣಾ ದಗ್ಗುಬಾಟಿ, ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದು, ಆ ಪೈಕಿ ಮಹೇಶ್ ಬಾಬು ಪ್ರಮುಖರು.

ಈ ಕುರಿತು ಮಾತನಾಡಿರುವ ಮಹೇಶ್ ಬಾಬು, ‘ನಟನಾಗಿ ಒಂದು ಕೆರಿಯರ್ ಕಟ್ಟಿಕೊಳ್ಳುವುದಕ್ಕೆ ಹಲವು ವರ್ಷಗಳ ಶ್ರದ್ಧೆ, ಪರಿಶ್ರಮ, ತಾಳ್ಮೆ ಎಲ್ಲವೂ ಬೇಕಾಗುತ್ತದೆ. ಆದರೆ, ಯಾರೋ ಮುಖವಿಲ್ಲದ ವ್ಯಕ್ತಿ ಒಂದು ದಿನ ಇದ್ದಕ್ಕಿದ್ದಂತೆ ಅವನ ಸಂಬಳಕ್ಕಾಗಿ, ನಿಮ್ಮ ಕುರಿತು ಕೆಟ್ಟದಾಗಿ ಬರೆಯುತ್ತಾ ಹೋಗುತ್ತಾನೆ. ಸುಳ್ಳ ಸುದ್ದಿಗಳನ್ನು ಹಬ್ಬಿಸುತ್ತಾನೆ. ನಮ್ಮ ಅದ್ಭುತ ತೆಲುಗು ಚಿತ್ರರಂಗವನ್ನು ಇಂಥವರಿಂದ ಕಾಪಾಡಬೇಕು. ನಮ್ಮ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮತ್ತು ಮುಖಕ್ಕೆ ಮಸಿ ಬಳಿಯುವ ಫೇಕ್ ವೆಬ್‌ಸೈಟ್‌ಗಳ ವಿರುದ್ಧ ಚಿತ್ರರಂಗ ಏನಾದರೂ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net