Maharashtra | ರಸಗೊಬ್ಬರ ಘಟಕದಲ್ಲಿ ಅನಿಲ ಸೋರಿಕೆಯಿಂದಾಗಿ ಮೂವರು ಮೃತ; 9 ಮಂದಿ ಸ್ಥಿತಿ ಚಿಂತಾಜನಕ

Untitled design - 2024-11-22T151353.843
Published on

ಮುಂಬೈ: ಮಹಾರಾಷ್ಟ್ರದ(Maharashtra) ಸಾಂಗ್ಲಿ ಜಿಲ್ಲೆಯ ಕೆಮಿಕಲ್ ಕಂಪನಿಯೊಂದರಲ್ಲಿ ಗ್ಯಾಸ್ ಸೋರಿಕೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅನಿಲ ಸೋರಿಕೆಯಿಂದಾಗಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಇದು ರಸಗೊಬ್ಬರ ಸ್ಥಾವರವಾಗಿದ್ದು ರಿಯಾಕ್ಟರ್‌ನಲ್ಲಿ ಸ್ಫೋಟಗೊಂಡ ನಂತರ ಅನಿಲ ಸೋರಿಕೆಯಾಗಲು ಪ್ರಾರಂಭಿಸಿತು ಎಂದು ಹೇಳಲಾಗುತ್ತಿದೆ.

ಜಿಲ್ಲೆಯ ಕಡೆಗಾಂವ್ ತಹಸಿಲ್‌ನ ಶಾಲ್ಗಾಂವ್ ಎಂಐಡಿಸಿಯಲ್ಲಿರುವ ಮ್ಯಾನ್ಮಾರ್ ಕೆಮಿಕಲ್ ಕಂಪನಿಯಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ. ರಸಗೊಬ್ಬರ ಸ್ಥಾವರದಲ್ಲಿನ ರಿಯಾಕ್ಟರ್ ಸ್ಫೋಟಗೊಂಡಿದ್ದು, ರಾಸಾಯನಿಕ ಹೊಗೆಯನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ ಸೋರಿಕೆಯಿಂದಾಗಿ ಘಟಕದ ಸುಮಾರು 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಪೈಕಿ ಇಬ್ಬರು ಮಹಿಳಾ ಉದ್ಯೋಗಿಗಳು ಹಾಗೂ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನು ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಡೆಗಾಂವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಗ್ರಾಮ್ ಶೆವಾಲೆ ತಿಳಿಸಿದ್ದಾರೆ.

ಮೃತಪಟ್ಟ ಇಬ್ಬರು ಮಹಿಳೆಯರನ್ನು ಸಾಂಗ್ಲಿ ಜಿಲ್ಲೆಯ ಯೆಟ್‌ಗಾಂವ್‌ನ ಸುಚಿತಾ ಉತ್ಲೆ (50) ಮತ್ತು ಸತಾರಾ ಜಿಲ್ಲೆಯ ಮಸೂರ್‌ನ ನೀಲಂ ರೆತ್ರೆಕರ್ (26) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋರಿಕೆಯಾದ ಅನಿಲವನ್ನು ಅಮೋನಿಯಾ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೆ ಇತ್ತೀಚೆಗೆ ಗುಜರಾತ್‌ನ ಕಾರ್ಖಾನೆಯೊಂದರಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಇತರರಿಂದ ಉತ್ತರವನ್ನು ಕೇಳಿದೆ.

ಮಾಧ್ಯಮ ವರದಿಯನ್ನು ಎನ್‌ಜಿಟಿ ಸ್ವಯಂಪ್ರೇರಿತವಾಗಿ ಸ್ವೀಕರಿಸಿ ಸಮಸ್ಯೆಯನ್ನು ಆಲಿಸಿತು. ಸುದ್ದಿ ಪ್ರಕಾರ, ಅಕ್ಟೋಬರ್ 27ರಂದು ಅಹಮದಾಬಾದ್‌ನ ನರೋಲ್ ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ವಿಷಕಾರಿ ಹೊಗೆಯಿಂದಾಗಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಅದರಲ್ಲಿ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಿಂಟಿಂಗ್ ಮತ್ತು ಡೈಯಿಂಗ್ ಪ್ರಕ್ರಿಯೆಯಲ್ಲಿ ಬಳಸಲಾದ ಆಮ್ಲವನ್ನು ಟ್ಯಾಂಕ್‌ಗೆ ವರ್ಗಾಯಿಸುವಾಗ ಅನಿಲ ಸೋರಿಕೆ ಸಂಭವಿಸಿದೆ ಎನ್ನಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net