ಇಬ್ಬರನ್ನು ಹತ್ಯೆ ಮಾಡಿ, ಒಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿ ಅರೆಸ್ಟ್​​; ಪೊಲೀಸರು ನೀಡಿದ ಮಾಹಿತಿ ಹೀಗಿದೆ.. | New York

Untitled design - 2024-11-20T152430.829
Published on

ನ್ಯೂಯಾರ್ಕ್​​: (New York) ಮ್ಯಾನ್‌ಹ್ಯಾಟನ್‌ನಲ್ಲಿ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಿ ಮತ್ತು ಮೂರನೇ ವ್ಯಕ್ತಿಗೆ ಗಂಭೀರವಾಗಿ ಗಾಯಗೊಳಿಸಿದ ಆರೋಪಿಯನ್ನು ಬಂಧಿಸಿರುವುದಾಗಿ ನ್ಯೂಯಾರ್ಕ್ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹತ್ಯೆ ಸೋಮವಾರ(ನವೆಂಬರ್​​18)ಬೆಳಗ್ಗೆ ನಡೆದಿದೆ. ಬೆಳಗ್ಗೆ 8.20ಕ್ಕೆ 36 ವರ್ಷದ ವ್ಯಕ್ತಿಯೊಬ್ಬನಿಗೆ ಚೂರಿ ಇರಿದ ಬಳಿಕ 19ನೇ ಬೀದಿಯಲ್ಲಿ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾರೆ. ಮೂರನೇ ದಾಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಮಿಡ್‌ಟೌನ್‌ನ 42ನೇ ಬೀದಿಯಲ್ಲಿ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೆ ಬಳಸಿದ ರಕ್ತಸಿಕ್ತ ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ದಾಳಿಯಲ್ಲಿ ಇಬ್ಬರು ಅಮಾಯಕರು ಮೃತಪಟ್ಟಿದ್ದು, ಮಹಿಳೆಯೊಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೊಲೀಸ್ ಮುಖ್ಯಸ್ಥ ಜೋಸೆಫ್ ಕೆನ್ನಿ ಹೇಳಿದ್ದಾರೆ. ಈ ದಾಳಿಯಲ್ಲಿ ಬೇರೆ ಯಾವುದೇ ದಾಳಿಕೋರರು ಭಾಗಿಯಾಗಿಲ್ಲ ಎಂದು ಪೊಲೀಸರ ಅಭಿಪ್ರಾಯವಾಗಿದೆ.

ಪೂರ್ವ 30ನೇ ಬೀದಿಯಲ್ಲಿ ವಾಸಿಸುತ್ತಿದ್ದ ಆರೋಪಿ ಹತ್ಯೆ ಮಾಡಿದ ನಂತರ 46ನೇ ಬೀದಿಯಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿದ್ದಾನೆ. ಅವರೆಲ್ಲರೂ ಒಬ್ಬಂಟಿಯಾಗಿದ್ದರಿಂದ ಹತ್ಯೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.

ನಮ್ಮ ಅಪರಾಧ ನ್ಯಾಯ ವ್ಯವಸ್ಥೆ ಮತ್ತು ಮಾನಸಿಕ ಆರೋಗ್ಯ ವ್ಯವಸ್ಥೆಯು ನ್ಯೂಯಾರ್ಕ್ ನಿವಾಸಿಗಳನ್ನು ಹೇಗೆ ವಿಫಲಗೊಳಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net