ಧ್ಯಾನ, ಸಾಧನೆ, ಸೇವೆಯ ಅವಕಾಶವೇ ಮಹಾಕುಂಭ

Ravishankar Guruji
Published on
ಶ್ರೀ ಸ್ಫೂರ್ತಿ
ಕುಂಭವು ಸನಾತನ ಧರ್ಮದ ಆಧ್ಯಾತ್ಮಿಕ ಗೌರವ. ಕುಂಭವಲ್ಲದೆ ಈ ಭೂಮಿಯ ಮೇಲೆ ಬೇರೆಲ್ಲೂ ಶ್ರದ್ಧಾಳುಗಳು- ಸಿದ್ಧರು ಎಲ್ಲರೂಮಸೇರಿ ಒಂದೆಡೆಯಲ್ಲೇ ಸ್ನಾನ ಮಾಡಿ, ಸಾಧನೆ ಮಾಡುವ ನಿದರ್ಶನ ವಿಲ್ಲ. ಕುಂಭಮೇಳವು ಜಗತ್ತಿನ ಅತಿದೊಡ್ಡ ಮೇಳ. ಮಹಾಕುಂಭಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಜಗತ್ತಿನ ಎಲ್ಲೆಡೆಯಿಂದಲೂ ಅನೇಕ ಕೋಟಿ ಭಕ್ತರು ಮತ್ತು ಸಾಧಕರು ಒಂದೆಡೆ ಸೇರಿ, ಶಾಂತಿಪೂರ್ವಕ ವಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ ಮತ್ತು ತಮ್ಮ ಎಲ್ಲಾ ಪಾಪಗಳೂ ಹರಿದು ಹೋಗುತ್ತದೆಂದು ಮತ್ತು ತಾವು ಶುದ್ಧರಾಗಿದ್ದೇವೆ ಎಂಬ ಭಾವನೆಯನ್ನು ಹೊಂದುತ್ತಾರೆ.

ಮಹಾಕುಂಭದಲ್ಲಿ ಸಾಧುಸಂತರು ಮತ್ತು ಮಹಾತ್ಮರೂ ಸ್ನಾನ ಮಾಡಲು ಬರುತ್ತಾರೆ. ಆದರೆ ಅವರು ತಮ್ಮ ಪಾಪಗಳನ್ನು ಕಳೆಯಲು ಬರುವುದಿಲ್ಲ. ತಪಸ್ಸಿನ ಅಹಂಕಾರ ತಮಗೆ ಬರದೆ ಇರಲಿ ಎಂದು ಗಂಗಾಸ್ನಾನ ಮಾಡಿ, ತಮ್ಮ ತಪಸ್ಸಿನ ಫಲವನ್ನು ಗಂಗೆಗೆ ಸಮರ್ಪಿಸಿಬಿಡುತ್ತಾರೆ.

ತ್ರಿವೇಣಿ ಸಂಗಮದ ಸ್ನಾನದ ಪರಂಪರೆಯು ಪುರಾತನ ವಾದದ್ದು. ತ್ರಿವೇಣಿಯೆಂದರೆ ಗಂಗಾ, ಯಮುನಾ, ಸರಸ್ವತಿ ನದಿಗಳು ಸಂಗಮವಾಗುವ ಸ್ಥಳ. ಗಂಗೆಯು ಜ್ಞಾನದ ಪ್ರತೀಕವಾದರೆ, ಯಮುನೆಯು ಪ್ರೇಮದ ಪ್ರತೀಕ ಮತ್ತು ಸರಸ್ವತಿಯು ಪ್ರಜ್ಞೆಯ ಪ್ರತೀಕ. ಈ ಮೂರು ನದಿಗಳ ಸಂಗಮವು ಪ್ರೇಮ, ಜ್ಞಾನದ ಮತ್ತು ಪ್ರಜ್ಞೆಯ ಸಂಗಮವನ್ನು ಸೂಚಿಸುತ್ತದೆ. ತ್ರೀವೇಣಿಯಲ್ಲಿ ಸ್ನಾನ ಮಾಡಿದವರು ಪುಣ್ಯವನ್ನು ಮತ್ತು ಅಮರತ್ವವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ. ಪುರಾಣಗಳ ಕಥೆಯ ಪ್ರಕಾರ ಸಮುದ್ರ ಮಂಥನ ನಡೆದ ನಂತರ ಭಗವಾನ್ ವಿಷ್ಣುವು ಮೋಹಿನಿಯ ಮನಮೋಹಕ ಅವತಾರವನ್ನು ಧರಿಸಿ ದೇವತೆಗಳಿಗೆ ಮತ್ತು ರಾಕ್ಷಸರಿಗೆ ಅಮೃತವನ್ನು ಹಂಚುವ ಪ್ರಕ್ರಿಯೆಯಲ್ಲಿ, ಜಗನ್ಮೋಹಿನಿಯ ಕೈಯಲ್ಲಿದ್ದ ಕುಂಭದಿಂದ ಕೆಲವು ಅಮೃತದ ಬಿಂದುಗಳು ಭೂಮಿಯ ಮೇಲೆ ನಾಲ್ಕು ಸ್ಥಳಗಳಲ್ಲಿ ಬಿದ್ದವು. ಅದರಲ್ಲಿ ಒಂದು ಸ್ಥಳ ಪ್ರಯಾಗರಾಜದ ತ್ರಿವೇಣಿ ಸಂಗಮ. ಈ ಪುರಾಣದ ಕಥೆಯ ಆಳವಾದ ರಹಸ್ಯವು ನಮ್ಮ ಆಂತರ್ಯದಲ್ಲೇ ಇದೆ. ಇದನ್ನು ನಾವು ಆಳವಾದ ಧ್ಯಾನದಲ್ಲಿ ಅನುಭವಿಸಬಹುದು. ನಮ್ಮ ಇಡಾ, ಪಿಂಗಳ ಮತ್ತು ಸುಷುಮ್ನ ನಾಡಿಗಳಲ್ಲಿ ಶಕ್ತಿಯ ಪ್ರವಾಹವಾದಾಗ ನಮ್ಮ ಆಂತರ್ಯದಲ್ಲೇ ತ್ರಿವೇಣಿಯನ್ನು ಅನುಭವಿಸಬಹುದು. ನಾವು ಧ್ಯಾನದಲ್ಲಿ ಮಗ್ನರಾದಾಗ ನಾವು ಕೇವಲ ಶರೀರವಲ್ಲ, ನಾವು ಶಾಶ್ವತವಾಗಿ ರುವ ಚೇತನ ಎಂಬ ಅನುಭವ ಆಗುತ್ತದೆ. ಯೋಗಿಗಳು ಈ ಅನುಭವವನ್ನು ಸದಾ ಅನು ಭವಿಸುತ್ತಾರೆ. ಧ್ಯಾನದಲ್ಲಿ ಸ್ಥಿರವಾಗಿ ಸ್ಥಾಪಿತರಾಗಿ, ಜೀವಂತಿಕೆಯಿಂದ ತುಂಬಿ, ಪರಮ ಪ್ರಶಾಂತಿಯನ್ನು ಅನುಭವಿಸುವುದೇ ನಮ್ಮ ಆತ್ಮದ ಅನುಭವ, ಪರಮಾನಂದ. ನೀವು ಜನ್ಮ ತಾಳುವ ಮೊದಲು ತಾಯಿಯ ಗರ್ಭದಲ್ಲಿ ಧ್ಯಾನದ ಅನುಭವವನ್ನು ಪಡೆದಿರುತ್ತೀರಿ. ಅದೇ ಅನುಭವವನ್ನು ಮತ್ತೆ ಮತ್ತೆ ಪಡೆಯಲು ಹಾತೊರೆಯುತ್ತಿರುತ್ತೀರಿ. ಧ್ಯಾನವೆಂದರೆ ಆಳವಾದ ವಿಶ್ರಾಂತಿ. ಈ ಜಗತ್ತಿನಲ್ಲಿ ಎಲ್ಲವೂ ಚಕ್ರೀಯವಾದ ಗತಿಯಲ್ಲಿ ನಡೆಯುತ್ತದೆ ಮತ್ತು ಅಂತಿಮವಾಗಿ ಎಲ್ಲವೂ ತನ್ನ ಮೂಲ ಸ್ರೋತದೆಡೆಗೆ ಮರಳುತ್ತದೆ. ಇದೇ ಜಗತ್ತಿನ ಸ್ವಭಾವ. ನಮ್ಮ ಶರೀರಕ್ಕೆ ಭೋಜನವು ಅವಶ್ಯಕವಾದಂತೆಯೇ ಧ್ಯಾನವು ಆತ್ಮಕ್ಕೆ ಭೋಜನ.

ನೀವು ಮಾಡುವ ಸೇವೆಯಿಂದಾಗಿ ಯಾರಿಗಾದರೂ ಸಾಂತ್ವನ ದೊರೆತಲ್ಲಿ, ನಿಮ್ಮೊಳಗೆ ಸಕಾರಾತ್ಮಕ ಸ್ಪಂದನಗಳು ಹುಟ್ಟಲಾರಂಭಿಸುತ್ತವೆ. ಅದರಿಂದ ನಿಮಗೆ ಆಶೀರ್ವಾದಗಳು ಸಿಗುತ್ತವೆ. ಈ ಆಶೀರ್ವಾದದಿಂದ ನೀವು ಆಳವಾದ ಧ್ಯಾನದೊಳಗೆ ಹೊಕ್ಕಬಹುದು. ನಿಮ್ಮ ಕ್ಷಮತೆಗೆ ಅನುಗುಣವಾಗಿ ನಿಮ್ಮಿಂದ ಯಾವ ರೀತಿಯ ಸೇವೆ ಮಾಡಲು ಸಾಧ್ಯವೋ, ಅದನ್ನೇ ಮಾಡಿ. ನೀವು ಸೇವೆ ಮಾಡುತ್ತ ಹೋದರೆ, ಜೀವನದಲ್ಲಿ ಯಾವ ಕೊರತೆಯೂ ನಿಮಗಿರುವುದಿಲ್ಲ. ಈ ಜಗತ್ತಿನಲ್ಲಿ

ಎಲ್ಲರಿಗಾಗಿಯೂ ಏನೋ ಒಂದು ಒಳಿತನ್ನು ಮಾಡುವ ಸಲುವಾಗಿಯೇ ನೀವು ಬಂದಿರುವಿರಿ. ಈ ಜಗತ್ತಿನಿಂದ ನೀವು ಪಡೆದುಕೊಳ್ಳುವಂಥದ್ದು ಏನೂ ಇಲ್ಲ. ಇಲ್ಲಿ ನೀವು ಕೊಡಲು ಮಾತ್ರ ಬಂದಿರುವಿರಿ. ಪೌಷ ಮತ್ತು ಮಾಘ ಮಾಸದಲ್ಲಿ ಜನರು ತಮ್ಮ ಧ್ಯಾನ, ಸಾಧನೆಗಳಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಆತ್ಮದ ಶುದ್ಧತೆಯ, ದಿವ್ಯತೆಯ ಅನುಭವವನ್ನು ಪಡೆಯಬಹುದು. ಕುಂಭಮೇಳವು ಧ್ಯಾನ, ಸಾಧನೆ ಮತ್ತು ಸೇವೆಯ ಮುಖ್ಯ ಅವಕಾಶವನ್ನು ಒದಗಿಸಿಕೊಡುತ್ತದೆ. ಧ್ಯಾನ, ಸಾಧನೆ ಮತ್ತು ಸೇವೆಯು ಗುರುವಿನ ಕೃಪೆಯಿಂದ ಮಾತ್ರ ಸಾಧ್ಯ. ಈ ಕೃಪೆಯು ಸಾಧನೆ ಮಾಡುತ್ತ ಹೋದಂತೆ ಹೆಚ್ಚಾಗಿ ಪ್ರಕಟವಾಗತೊಡಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net