
ಭೋಪಾಲ್: ನಕಲಿ ವೈದ್ಯರೊಬ್ಬರು (Fake Doctor) ಹೃದ್ರೋಗ ತಜ್ಞರಂತೆ ನಟಿಸಿ ಮಿಷನರಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿ 7 ರೋಗಿಗಳ ಹತ್ಯೆ ಮಾಡಿದ್ದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ನಕಲಿ ಹೃದ್ರೋಗ ತಜ್ಞರಿಂದ ಚಿಕಿತ್ಸೆ ಪಡೆದ ನಂತರ ಏಳು ಮಂದಿ ಸಾವನ್ನಪ್ಪಿದ ಬಳಿಕ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ತಂಡವು ಸೋಮವಾರ (7) ದಂದು ದಾಮೋಹ್‌ಗೆ ತಲುಪಿದ್ದು, ಬುಧವಾರದವರೆಗೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಿದೆ. ದಾಮೋಹ್ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಮ್‌ಎಚ್‌ಒ) ಎಂ.ಕೆ. ಜೈನ್ ಅವರ ದೂರಿನ ಮೇರೆಗೆ ಆರೋಪಿ ಡಾ. ನರೇಂದ್ರ ಜಾನ್ ಕ್ಯಾಮ್ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳದೆ ಮಿಷನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಂಜಿಯೋಗ್ರಫಿ ಮತ್ತು ಆಂಜಿಯೋಪ್ಲ್ಯಾಸ್ಟಿ ಮಾಡುವ ಮೂಲಕ ಡಾ. ಕ್ಯಾಮ್ ವಂಚನೆ ಮಾಡಿದ್ದಾರೆ ಎಂದು ಜೈನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಧ್ಯಪ್ರದೇಶದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸದಿದ್ದಲ್ಲಿ ಯಾವುದೇ ವೈದ್ಯರು ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣದ ತನಿಖೆ ನಡೆಸಿದ್ದು, ಡಾ. ಕ್ಯಾಮ್ ಈಗಾಗಲೇ ವೈದ್ಯಕೀಯ ಸೇವೆಯನ್ನು ತೊರೆದಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಮಿಷನ್ ಆಸ್ಪತ್ರೆಯು ಹಾಜರುಪಡಿಸಿದ ಸಂಬಂಧಪಟ್ಟ ವೈದ್ಯರ ದಾಖಲೆಗಳ ಪ್ರಕಾರ, ಅವರ ವೈದ್ಯಕೀಯ ನೋಂದಣಿ ಪ್ರಮಾಣಪತ್ರವನ್ನು ಆಂಧ್ರಪ್ರದೇಶ ವೈದ್ಯಕೀಯ ಮಂಡಳಿ ನೀಡಿದೆ. ಆದರೆ ಆಂಧ್ರಪ್ರದೇಶ ವೈದ್ಯಕೀಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಡಾ.ಕ್ಯಾಮ್ ಅವರ ಹೆಸರು ನೋಂದಣಿಯಲ್ಲಿ ಕಂಡುಬಂದಿಲ್ಲ. ಆದ್ದರಿಂದ ಇದನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 315 (4) (ಅಪ್ರಾಮಾಣಿಕ ದುರುಪಯೋಗ), 338 (ನಕಲಿ), 336 (3) (ಮೋಸದ ಉದ್ದೇಶದಿಂದ ದಾಖಲೆಗಳನ್ನು ರಚಿಸುವುದು ಅಥವಾ ಬದಲಾಯಿಸುವುದು), 340 (2) (ನಕಲಿ ದಾಖಲೆಗಳು ಮತ್ತು ಡಿಜಿಟಲ್ ದಾಖಲೆಗಳು) ಮತ್ತು 3 (5) (ಸಾಮಾನ್ಯ ಉದ್ದೇಶವನ್ನು ಮುಂದಿಟ್ಟುಕೊಂಡು ಹಲವಾರು ವ್ಯಕ್ತಿಗಳು ಕ್ರಿಮಿನಲ್ ಕೃತ್ಯ ಎಸಗಿದಾಗ ಜಂಟಿ ಕ್ರಿಮಿನಲ್ ಹೊಣೆಗಾರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯಾರು ಈ ನಕಲಿ ವೈದ್ಯ?
ಆರೋಪಿಯು ತನ್ನನ್ನು ತಾನು ಖ್ಯಾತ ಬ್ರಿಟಿಷ್ ಹೃದ್ರೋಗ ತಜ್ಞ ಡಾ. ಎನ್. ಜಾನ್ ಕೀಮ್ ಎಂದು ಪರಿಚಯಿಸಿಕೊಳ್ಳುವ ಮೂಲಕ ಆಸ್ಪತ್ರೆಯಲ್ಲಿ ಕೆಲಸ ಪಡೆದಿದ್ದಾನೆ. ಆತ ಹಲವಾರು ರೋಗಿಗಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದು, ಅವರಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ತನಿಖೆಯ ಸಮಯದಲ್ಲಿ ಆತನ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ತಿಳಿದುಬಂದಿದೆ ಮತ್ತು ಆತ ಈ ಹಿಂದೆಯೂ ಹಲವಾರು ವಿವಾದಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಈ ಗಂಭೀರ ವಿಷಯದ ಬಗ್ಗೆ ವಕೀಲರೂ ಆದ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ದೀಪಕ್ ತಿವಾರಿ ಮಾಹಿತಿ ನೀಡಿದರು. ಅಧಿಕೃತ ಸಾವಿನ ಸಂಖ್ಯೆ 7 ಆಗಿದ್ದರೂ, ನಿಜವಾದ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು ಎಂದು ಅವರು ಹೇಳಿದರು. ಅವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರಿಂದ ತನಿಖೆ ಚುರುಕುಗೊಂಡಿದೆ.
ನಿಮಗೇನಾದ್ರೂ ಮಾನವೀಯತೆ ಇದೆಯಾ? ಸ್ಟೇಡಿಯಂನಲ್ಲಿ ಗಿಲ್-ಇಶಾನ್ ವರ್ತನೆಗೆ ನೆಟ್ಟಿಗರ ಆಕ್ರೋಶ! SRH vs GT