ಭೋಪಾಲ್: ಸಿನಿಮಾದಲ್ಲಿ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳೆರಡನ್ನು ತೋರಿಸುತ್ತಾರೆ. ಇದರರ್ಥ ಒಳ್ಳೆಯ ವಿಷಯಗಳಿಂದ ಪ್ರೇರಿತರಾಗಲಿ, ಕೆಟ್ಟ ವಿಷಯಗಳನ್ನು ಜೀವನದಲ್ಲಿ ಆ ರೀತಿ ಮಾಡಬಾರದು ಎಂಬುದನ್ನು ಅರಿತುಕೊಳ್ಳಲಿ ಎಂಬುದಾಗಿರುತ್ತದೆ. ಆದರೆ ಬಾಲಿವುಡ್ನ ಧೂಮ್-2 ಸಿನಿಮಾದಿಂದ ಪ್ರೇರಿತನಾಗಿ ಕಳ್ಳತನ ಮಾಡಿರುವ ಸುದ್ದಿಯೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಇದನ್ನು ಓದಿ: ಭಯೋತ್ಪಾದಕರು ನನೆಗ ಈ ಶಾಲು ಕೊಟ್ಟರು… IC 814 ವಿಮಾನ ಹೈಜಾಕ್ ಕುರಿತು ಮಹಿಳೆ ಮಾತು
ಬಾಲಿವುಡ್ ಚಿತ್ರ ಧೂಮ್-2 ಸಿನಿಮಾದಲ್ಲಿನ ಹೃತಿಕ್ ರೋಷನ್ ಅವರ ಪಾತ್ರದಿಂದ ಪ್ರೇರಿತರಾಗಿ ಭೋಪಾಲ್‌ನಲ್ಲಿ ವ್ಯಕ್ತಿಯೊಬ್ಬರು ವಸ್ತುಸಂಗ್ರಹಾಲಯದಿಂದ 15 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕದಿಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಕಹಾನಿಯಲ್ಲಿ ಟ್ವಿಸ್ಟ್ ಎಂದರೆ ಕಳ್ಳನು ಭೋಪಾಲ್‌ನ ಸ್ಟೇಟ್ ಮ್ಯೂಸಿಯಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅವನ ಪಕ್ಕದಲ್ಲಿ ಪ್ರಾಚೀನ ಚಿನ್ನದ ನಾಣ್ಯಗಳು ಮತ್ತು ಆಭರಣಗಳಂತಹ ಬೆಲೆಬಾಳುವ ಕಲಾಕೃತಿಗಳು ಬಿದ್ದಿವೆ. ಕಳ್ಳನೆಂದು ನಂಬಲಾಗಿರುವ ಬಿಹಾರದ ಗಯಾ ನಿವಾಸಿ ವಿನೋದ್ ಯಾದವ್ ಭಾನುವಾರ ಸಂಜೆ ಟಿಕೆಟ್ ಖರೀದಿಸಿ ಮ್ಯೂಸಿಯಂಗೆ ಪ್ರವೇಶಿಸಿದ್ದು, ಮ್ಯೂಸಿಯಂ ಮುಚ್ಚುವವರೆಗೂ ಒಳಗೆ ಇದ್ದು ಅಲ್ಲೇ ಅಡಗಿ ಕುಳಿತಿದ್ದ ಎನ್ನಲಾಗಿದೆ.
ಸೋಮವಾರದಂದು ಮ್ಯೂಸಿಯಂ ಮುಚ್ಚಿರುವುದರಿಂದ ಭಾನುವಾರ ಸಂಜೆ ಮ್ಯೂಸಿಯಂನ ಎಲ್ಲಾ ಭಾಗಗಳನ್ನು ಲಾಕ್ ಮಾಡಲಾಗಿತ್ತು. ಪೊಲೀಸರು ಎಲ್ಲಾ ನಿರ್ಗಮನ ದ್ವಾರಗಳನ್ನು ತಡೆದು ವಸ್ತುಸಂಗ್ರಹಾಲಯವನ್ನು ಶೋಧಿಸಿದ್ದಾರೆ. ಈ ವೇಳೆ ಆರೋಪಿ 25 ಅಡಿ ಗೋಡೆಯಿಂದ ಜಿಗಿಯುವಾಗ ಗಾಯಗೊಂಡಿದ್ದಾನೆ ಎಂದು ಮ್ಯೂಸಿಯಂ ಸಿಬ್ಬಂದಿ ತಿಳಿಸಿದ್ದಾರೆ.
ಸೋಮವಾರದಂದು ಮ್ಯೂಸಿಯಂ ಕ್ಲೋಸ್ ಇದ್ದದರಿಂದ ಮಂಗಳವಾರ ಬೆಳಗ್ಗೆ 10.30ಕ್ಕೆ ಮ್ಯೂಸಿಯಂ ತೆರೆದಾಗ, ಒಡೆದ ಗಾಜು ಮತ್ತು ಹಲವಾರು ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದನ್ನು ಸಿಬ್ಬಂದಿ ಪತ್ತೆ ಮಾಡಿದರು. ಭದ್ರತಾ ಸಿಬ್ಬಂದಿ ತಕ್ಷಣ ಆವರಣದಲ್ಲಿ ಹುಡುಕಾಟ ನಡೆಸಿದ್ದಾರೆ. ಶೋಧದ ಸಮಯದಲ್ಲಿ, ವಿನೋದ್ ಯಾದವ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕದ್ದ ಕಲಾಕೃತಿಗಳನ್ನು ತುಂಬಿದ ದೊಡ್ಡ ಚೀಲದ ಬಳಿ ಬಿದ್ದಿರುವುದು ಕಂಡುಬಂದಿದೆ. ಬ್ಯಾಗ್‌ನಲ್ಲಿ ಗುಪ್ತರ ಕಾಲದ ಚಿನ್ನದ ನಾಣ್ಯಗಳು, ಆಭರಣಗಳು ಮತ್ತು ಪಾತ್ರೆಗಳು ಸೇರಿದಂತೆ ಬ್ರಿಟಿಷ್ ಮತ್ತು ನವಾಬ್ ಕಾಲದ ಇತರ ವಸ್ತುಗಳು ಪತ್ತೆಯಾಗಿವೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ತಲಾ 50 ರಿಂದ 100 ಗ್ರಾಂ ತೂಕದ ಚಿನ್ನದ ನಾಣ್ಯಗಳಿದ್ದು, 8 ರಿಂದ 10 ಕೋಟಿ ರೂಪಾಯಿ ಮೌಲ್ಯ ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೌಲ್ಯ ಸುಮಾರು 15 ಕೋಟಿ ರೂಪಾಯಿ ಆಗಿರಬಹುದು ಎಂದು ಡಿಸಿಪಿ ಇಕ್ಬಾಲ್ ಹೇಳಿದ್ದಾರೆ. ಈ ವಸ್ತುಗಳನ್ನು ವಸ್ತುಸಂಗ್ರಹಾಲಯದಲ್ಲಿನ ಕೇವಲ ಎರಡು ಕೊಠಡಿಗಳಿಂದ ತೆಗೆದುಕೊಳ್ಳಲಾಗಿದೆ. ಇಡೀ ವಸ್ತು ಸಂಗ್ರಹಾಲಯದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕಲಾಕೃತಿಗಳಿವೆ ಎಂದು ತಿಳಿಸಿದ್ದಾರೆ.
ಆರೋಪಿ ವಿನೋದ್ ಯಾದವ್ ಕಳೆದ ಆರು ತಿಂಗಳಿನಿಂದ ರಾಜ್ಯ ವಸ್ತು ಸಂಗ್ರಹಾಲಯದಲ್ಲಿ ಕಳ್ಳತನಕ್ಕೆ ತಯಾರಿ ನಡೆಸಿದ್ದ ಎಂದು ಹೇಳಲಾಗುತ್ತಿದೆ. ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮ್ಯೂಸಿಯಂನಿಂದ ಕದಿಯಲು ಯತ್ನಿಸಿದ್ದಾಗಿ ಯಾದವ್ ಪೊಲೀಸರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ನಿತ್ಯ ಬಳಸುವ ಡಿಯೋಡ್ರೆಂಟ್ ಹೃದಯಾಘಾತಕ್ಕೆ ಕಾರಣವಾಗಬಹುದು; ಉಪಯುಕ್ತ ಮಾಹಿತಿ ನಿಮಗಾಗಿ