

ವಿಜಯವಾಣಿ ಸುದ್ದಿಜಾಲ, ಆರ್ಡಿ
ಮಾಡು ಒಲ್ಲದ ಖ್ಯಾತಿಯ ಮಡಾಮಕ್ಕಿ ಮಹತೋಭಾರ ವೀರಭದ್ರ ದೇವಸ್ಥಾನದಲ್ಲಿ ಫೆ.9ರಂದು ಜಾತ್ರಾ ಮಹೋತ್ಸವ , ಕೆಂಡಸೇವೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೇವಳವು ಸಾವಿರ ವರ್ಷ ಇತಿಹಾಸವಿದ್ದು ಪ್ರಸಿದ್ಧ ಬಾರ್ಕೂರು ಅರಸರ ಆಳ್ವಿಕೆಗೊಳಪಟ್ಟಿದೆ ಎಂದು ಶಿಲಾಶಾಸನವಿದ್ದು ದೇವಳವು ನೇಪಾಳಿ ಶೈಲಿಯಲ್ಲಿದೆ. ವೀರಭದ್ರ ದೇವರಿಗೆ ಗರ್ಭಗುಡಿಯೇ ಇಲ್ಲ. ಆದ್ದರಿಂದ ಈ ದೇವಳಕ್ಕೆ ಮಾಡು ಒಲ್ಲದ ವೀರಭದ್ರ ಕ್ಷೇತ್ರವೆಂದು ಪ್ರಸಿದ್ಧಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಮಡಾಮಕ್ಕಿ ನದಿಯ ತಟದಲ್ಲಿ ಜರಗುವ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಆಗಮಿಸುವ ಸಾವಿರಾರು ಭಕ್ತರು ಆಗಮಿಸುತ್ತಿದ್ದು ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಲಿದ್ದಾರೆ.
ಪುರಾತನ ಕಾಲದಲ್ಲಿ ರಕ್ಕಸರ ಅಟ್ಟಹಾಸ ಹೆಚ್ಚಿದಾಗ ವೃಷಭಯೋಗೇಶ್ವರ ಮುನಿಯು ಶಿವನನ್ನು ಕುರಿತು ಸುದೀರ್ಘ ತಪಸ್ಸು ಮಾಡಿದಾಗ ಶಿವಪುತ್ರ ವೀರಭದ್ರ ಪ್ರತ್ಯಕ್ಷನಾಗಿ ರಕ್ಕಸರನ್ನು ಕಂಡು ಕೋಪೋದ್ರಿಕ್ತನಾಗಿ ತನ್ನ ತಲೆಯನ್ನು ಸಮೀಪದ ದೊಡ್ಡ ಶಿಲೆಗೆ ಬಡಿದನಂತೆ. ಬಡಿತಕ್ಕೆ ಶಿಲೆ ಚೂರು ಚೂರಾಗಿ ಸಿಡಿಯಿತು. ಸಿಡಿದ ಅರ್ಧ ಚಂದ್ರಾಕೃತಿಯ ಒಂದು ಶಿಲೆಯನ್ನು ವೃಷಭಯೋಗೇಶ್ವರ ಮುನಿ ತಂದು ಮಡಾಮಕ್ಕಿ ಸಮೀಪದ ದೊಡ್ಡ ಬಾವಿಯಲ್ಲಿ ಮಡಾಮಕ್ಕಿ, ಬೇಳಂಜೆ ಸಂಸ್ಥಾನಗಳ ರಾಜರ ರತ್ನ ವೈಢೂರ್ಯಾದಿಗಳನ್ನು ತಂದು ಬಾವಿಯಲ್ಲಿ ಹಾಕಿ ಭದ್ರಗೊಳಿಸಿ, ಅದಕ್ಕೆ ಮಣ್ಣಿನಕಟ್ಟೆಯನ್ನು ಕಟ್ಟಿ ಅದರ ಮೇಲೆ ತಂದು ಶಿಲೆ ಪ್ರತಿಷ್ಠಾಪನೆ ಮಾಡಿದನೆಂದು ಪುರಾಣದಲ್ಲಿ ಉಲ್ಲೇಖವಿದೆ. ವೀರಭದ್ರ ಮೊಣಕಾಲು ಊರಿ ನೆಲೆಯಾದ ಸ್ಥಳಕ್ಕೆ ಊರಿಗೆ ಮಡಾಮಕ್ಕಿ ಎಂಬ ಹೆಸರು ಬಂದಿದೆ. ಕ್ಷೇತ್ರಕ್ಕೆ ಕೋಟೆರಾಯ ಪರಿವಾರ ದೇವಗಣಗಳ ರಕ್ಷಣೆ ಇದೆ ಎಂದು ಪ್ರತೀತಿ. ಇಲ್ಲಿ ಅರ್ಧಚಂದ್ರಾಕೃತಿಯ ಶಿಲೆಯೇ ವೀರಭದ್ರನ ಸಾನ್ನಿಧ್ಯ. ವೀರಭದ್ರ ನೆಲೆನಿಂತ ಮಣ್ಣಿನ ಕಟ್ಟೆಯ ಮಣ್ಣು(ಮೃತ್ತಿಕೆ) ಪ್ರಸಾದ ರೂಪವಾಗಿ ಭಕ್ತರಿಗೆ ಹಂಚುವುದು ವಿಶೇಷ.
ಜಾತ್ರಾ ಮಹೋತ್ಸವ, ಕೆಂಡ ಸೇವೆ ದಿನದಂದು ತುಲಾಭಾರ ಸೇವೆ ಹಾಗೂ ಇನ್ನಿತರ ಸೇವೆಗಳು, ಮಹಾ ಅನ್ನಸಂತರ್ಪಣೆ, ರಾತ್ರಿ ಕ್ಷೇತ್ರದ ಮೇಳದಿಂದ ಯಕ್ಷಗಾನ ನೃತ್ಯಸೇವೆ, ವೀರಭದ್ರ ಸ್ವಾಮಿ, ಬನಶಂಕರಿ ದೇವಿಯ ದರ್ಶನ, ಕೆಂಡಸೇವೆ, ರಂಗಪೂಜೆ, ಢಮರುಸೇವೆ, ಪರಿವಾರ ದೇವತೆಗಳ ಕೋಲ ಸೇವೆ ನಡೆಯುತ್ತವೆ. ವೀರಭದ್ರ ಸ್ವಾಮಿ ದರ್ಶನದಲ್ಲಿ ಪಾತ್ರಿಯು ಚೂಪಾದ ಮುಳ್ಳಿನ ಪಾದುಕೆ ಧರಿಸಿ ವೀರಭದ್ರನ ಮಣ್ಣಿನ ಕಟ್ಟೆಯ(ಸನ್ನಿಧಾನ)ವನ್ನು ಪ್ರದಕ್ಷಿಣೆ ಬರುವುದು ಕ್ಷೇತ್ರದಲ್ಲಿ ವಿಶೇಷವಾಗಿದೆ. ಕ್ಷೇತ್ರದ ಯಕ್ಷಗಾನ ಮೇಳವು ಯಶಸ್ವಿ ತಿರುಗಾಟದೊಂದಿಗೆ ಕ್ಷೇತ್ರದ ಕೀರ್ತಿ ಹೆಚ್ಚಿಸಿದೆ.
ದೇವಳದ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಶಶಿಧರ ಶೆಟ್ಟಿ ಮಡಾಮಕ್ಕಿ, ಕ್ಷೇತ್ರದ ಆಡಳಿತದಾರ ಹಾಗೂ ಮುಖ್ಯ ಅರ್ಚಕ ಕೃಷ್ಣಮೂರ್ತಿ ಮಂಜ ಮಡಾಮಕ್ಕಿ, ಊರ_ ಪರವೂರ ಭಕ್ತರು, ದಾನಿಗಳ ಸಹಕಾರದಿಂದ ಮಡಾಮಕ್ಕಿ ಕ್ಷೇತ್ರವು ಅಭಿವೃದ್ಧಿಯೊಂದಿಗೆ ಪುಣ್ಯ ಕ್ಷೇತ್ರವಾಗಿ ಖ್ಯಾತಿ ಗಳಿಸಿದೆ. ವಿರಾಜಪೇಟೆ ಬೈಂದೂರು ರಾಜ್ಯ ಹೆದ್ದಾರಿಯ ಮಡಾಮಕ್ಕಿಯಿಂದ 1 ಕಿ.ಮೀ ದೂರದಲ್ಲಿದೆ. ಹೆಬ್ರಿ-ಮಾಂಡಿಮೂರುಕೈ, ಸೋಮೆಶ್ವರ-ಹಾಲಾಡಿ ಮಾರ್ಗವಾಗಿ ದೇವಳಕ್ಕೆ ತಲುಪಬಹುದು.
ಫೆ.9ರಂದು ಬೆಳಗ್ಗೆ ಗಣೇಶ ಪ್ರಾರ್ಥನೆ, ಪುಣ್ಯಾಹ, ನವಕ ಪ್ರಧಾನ ಹೋಮ ಕಲಶ, ಶತ ರುದ್ರಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 12.30ಕ್ಕೆ ತುಲಾಭಾರ ಸೇವೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಕೆಂಡ ಸೇವೆಗೆ ಅಗ್ನಿ ಸ್ಪರ್ಶ, ಯಕ್ಷಗಾನ ನೃತ್ಯಸೇವೆ, 9.30ರಿಂದ ಶ್ರೀಸ್ವಾಮಿ ಹಾಗೂ ಅಮ್ಮನವರ ದರ್ಶನ, ಕೆಂಡ ಸೇವೆ, 10.30ರಿಂದ ಪರಿವಾರ ದೈವಗಳ ಕೋಲ ಹಾಗೂ ದರ್ಶನ, 1.30ರಿಂದ ರಂಗ ಪೂಜೆ, ಢಮರು ಸೇವೆ, ಸುತ್ತು ಬಲಿ, ಸ್ವಾಮಿ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ.