

ನವದೆಹಲಿ: ಮ್ಯೂನಿಚ್ನಿಂದ ಬ್ಯಾಂಕಾಕ್ಗೆ ಹೊರಟಿದ್ದ ಲುಫ್ತಾನ್ಸಾ ವಿಮಾನವನ್ನು ಕಳೆದ ಬುಧವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಜರ್ಮನಿ ಯುವಕ ಮತ್ತು ಆತನ ಥಾಯ್ ಪತ್ನಿ ನಡುವಿನ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ.
ವಿಮಾನ ಮ್ಯೂನಿಚ್ನಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಈ ದಂಪತಿ ಮಧ್ಯೆ ಜಗಳ ಶುರುವಾಯಿತು. ಪತ್ನಿಯು ಪೈಲಟ್ ಬಳಿ ಹೋಗಿ, ಪತಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದಳು. ನಂತರ ದಂಪತಿ ಜಗಳ ತಾರಕಕ್ಕೇರಿತು. ಅವರಿಬ್ಬರ ಅನುಚಿತ ವರ್ತನೆ ಬಗ್ಗೆ ಪೈಲಟ್ಗಳು, ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ನೀಡಿದರು. ಪಾಕಿಸ್ತಾನದ ಹತ್ತಿರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಅನುಮತಿ ಕೋರಲಾಯಿತು. ಪಾಕ್ ಈ ಮನವಿಯನ್ನು ತಿರಸ್ಕರಿಸಿದ ನಂತರ ದೆಹಲಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿ, ಪ್ರಕರಣವನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು. ಅಧಿಕಾರಿಗಳು ಜರ್ಮನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ನಂತರ ಆ ವ್ಯಕ್ತಿ ಕ್ಷಮೆ ಯಾಚಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ವ್ಯಕ್ತಿ ವಿಮಾನದಲ್ಲಿ ಆಹಾರ ಎಸೆದು, ಲೈಟರ್ ಬಳಸಿ ಹೊದಿಕೆ ಸುಡಲು ಪ್ರಯತ್ನಿಸಿದ್ದಾನೆ. ಸಿಬ್ಬಂದಿ ನೀಡಿದ ಸೂಚನೆಗಳನ್ನು ಪಾಲಿಸಿಲ್ಲ, ಹಾಗಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಸಿಬ್ಬಂದಿ ತಿಳಿಸಿದ್ದಾರೆ.