ಲೂಸಿಯಾ ರಿ-ರಿಲೀಸ್ ; ಸತೀಶ್, ಪವನ್‌ ಹತ್ತು ವರ್ಷಗಳ ಸಂಭ್ರಮಾಚರಣೆ

kannada-film-lucia-wallpaper_137827159260
Published on

ಬೆಂಗಳೂರು:

ಪವನ್ ಕುಮಾರ್ ನಿರ್ದೇಶನದ, ಸತೀಶ್ ನೀನಾಸಂ ಅಭಿನಯದ ಚಿತ್ರ ‘ಲೂಸಿಯಾ’. 2013ರ ಸೆ. 6ರಂದು ಬಿಡುಗಡೆಯಾಗಿದ್ದ ಸತೀಶ್ ನೀನಾಸಂ ನಾಯಕನಾಗಿ ನಟಿಸಿದ ಮೊದಲ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಮರ್ಷಿಯಲ್‌ಆಗಿ ಕೈ ಹಿಡಿದಿದ್ದಲ್ಲದೇ ರಾಜ್ಯಪ್ರಶಸ್ತಿ, ಫಿಲಂಫೇರ್, ಸೈಮಾ ಪ್ರಶಸ್ತಿಗಳನ್ನು ಚಿತ್ರ ಮುಡಿಗೇರಿಸಿಕೊಂಡಿತ್ತು.

ಇಂದು ಚಿತ್ರತಂಡಕ್ಕೆ ‘ಲೂಸಿಯಾ’ ದಶಕದ ಸಂಭ್ರಮ. ಹೀಗಾಗಿಯೇ ಇವತ್ತಿನಿಂದ ಚಿತ್ರವನ್ನು ರಿ-ರಿಲೀಸ್ ಮಾಡಿ ‘ಲೂಸಿಯಾ’ ಟೀಮ್ ಸಂಭ್ರಮವನ್ನು ಆಚರಿಸುತ್ತಿದೆ. ಈ ಬಗ್ಗೆ ನಾಯಕ ನೀನಾಸಂ ಸತೀಶ್, ‘ಒಂದು ಸಿನಿಮಾ ರಿ-ರಿಲೀಸ್ ಆಗುವುದು ತುಂಬ ಕಷ್ಟ. ರಿ-ರಿಲೀಸ್ ಆಗಬೇಕು ಅಂದರೆ ಆ ಸಿನಿಮಾ ಅಷ್ಟು ಚೆನ್ನಾಗಿರಬೇಕು. ‘ಲೂಸಿಯಾ’ ಅಂತಹ ಸಿನಿಮಾ. ಹೀಗಾಗಿಯೇ ಹತ್ತು ವರ್ಷಗಳ ಖುಷಿಯನ್ನು ಹೇಗೆ ಆಚರಿಸೋಣ ಎಂದು ಯೋಚಿಸುವಾಗ, ಒಂದೊಳ್ಳೆ ಚಿತ್ರವನ್ನು ಬಿಗ್‌ಸ್ಕ್ರೀನ್ ಮೇಲೆ ನೋಡಲು ಮತ್ತೊಮ್ಮೆ ಅವಕಾಶ ನೀಡಬಹುದು ಅಂತನ್ನಿಸಿತು. ಆ ಮೂಲಕ ಆಗ ಸಿನಿಮಾ ನೋಡದವರು, ಮತ್ತೆ ದೊಡ್ಡ ಪರದೆಯಲ್ಲಿ ಸಿನಿಮಾ ನೋಡಲು ಇಚ್ಛಿಸುವವರಿಗೆ ಇದು ಉತ್ತಮ ಅವಕಾಶ. ಹೀಗಾಗಿ ಮತ್ತೆ ಬಿಡುಗಡೆ ಮಾಡುತ್ತಿದ್ದೇವೆ. ಸಂತೋಷ ಅಂದರೆ ಆನ್‌ಲೈನ್ ಬುಕ್ಕಿಂಗ್ ಪ್ರಾರಂಭವಾದ ಕೆಲವೇ ಸಮಯದಲ್ಲಿ ಟಿಕೆಟ್‌ಗಳು ಬುಕ್ ಆಗಿವೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಲೂಸಿಯಾ ಚಿತ್ರದಲ್ಲಿ ಸತೀಶ್​ ನೀನಾಸಂಗೆ ಶೃತಿ ಹರಿಹರನ್​ ನಾಯಕಿಯಾಗಿ ನಟಿಸಿದ್ದರು. ಜತೆಗೆ ಅಚ್ಯುತ್​ ಕುಮಾರ್​, ರಿಷಬ್​ ಶೆಟ್ಟಿ, ಹಾರ್ದಿಕಾ ಶೆಟ್ಟಿ, ಬಾಲಾಜಿ ಮನೋಹರ್​, ಪ್ರಶಾಂತ್​ ಸಿದ್ದಿ ಪ್ರಮುಖ ತಾರಾಗಣದಲ್ಲಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net