

ನವದೆಹಲಿ: ಕರೊನಾ ಲಾಕ್ಡೌನ್ನಿಂದ ತತ್ತರಿಸಿ ಜೀವನ ಹಳಿಗೆ ಬರುತ್ತಿರುವ ಸಂದರ್ಭದಲ್ಲಿ ಇಂಧನ ದರ ಏರಿಕೆ ಜತೆಗೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಿಗೆ ಭಾರಿ ಹೊರೆಯಾಗುತ್ತಿದೆ.
ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ದಿನೇದಿನೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಎಲ್ಪಿಜಿ ಸಿಲಿಂಡರ್ ಬೆಲೆ ಸೋಮವಾರ (ಮಾರ್ಚ್ 1) ಸಹ 25 ರೂ. ಏರಿಕೆಯಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಭಾರವಾಗಿದೆ. ಮೂರು ದಿನಗಳ ಹಿಂದಷ್ಟೇ 25 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾಗಿರುವುದು ಜನ ಸಾಮಾನ್ಯರ ಬದುಕು ಎಲ್ಲಗೆ ಹೋಗಿ ನಿಲ್ಲುತ್ತದೆ ಎಂದು ಹೇಳಲಾಗದು.
ಸಿಲಿಂಡರ್ ಹೆಚ್ಚಳ ವಿಷಯಕ್ಕೆ ಬಂದರೆ, 14.2 ಕೆಜಿ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 819 ರೂ. ತಲುಪಿದ್ದು, ನೂತನ ಬೆಲೆ ಮಾರ್ಚ್ 1ರಿಂದಲೇ ಜಾರಿಗೆ ಬಂದಿದೆ.
ಕಳೆದ ಫೆಬ್ರವರಿ 25ರಂದು ಅಡುಗೆ ಗ್ಯಾಸ್ ಬೆಲೆಯಲ್ಲಿ 25 ರೂ. ಏರಿಕೆ ಕಂಡಿತ್ತು. ಇದಕ್ಕೂ ಮುನ್ನ ಫೆ. 4 ಮತ್ತು 14ರಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು. ಡಿಸೆಂಬರ್ 1ರಲ್ಲಿ 594 ರೂ. ಇದ್ದ ಸಿಲಿಂಡರ್ ಬೆಲೆ 644ಕ್ಕೆ ಏರಿಕೆಯಾಗಿತ್ತು. ಬಳಿಕ ಡಿ. 15ರಲ್ಲಿ 694ಕ್ಕೆ ಏರಿಸಲಾಗಿತ್ತು. ಒಂದೇ ತಿಂಗಳಲ್ಲಿ 100 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿತ್ತು.
ಜನವರಿಯಲ್ಲಿ 694 ರೂ. ಇದ್ದ 14.2 ಕೆಜಿ ಸಿಲಿಂಡರ್ ಬೆಲೆ ಫೆ. 4ರಲ್ಲಿ 719ಕ್ಕೆ ಏರಿಸಲಾಯಿತು. ಕೇವಲ 10 ದಿನಗಳ ಅಂತರದಲ್ಲಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳವಾಗಿದೆ. ಇದೀಗ ಮತ್ತೆ 25 ರೂ. ಏರಿಕೆಯಾಗಿರುವುದು ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.
ಇಂಧನ ದರ ಏರಿಕೆಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ದ್ವಿಗುಣವಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕುವ ಲಕ್ಷಣಗಳು ಗೋಚರಿಸದೇ ಇರುವುದರಿಂದ ದುನಿಯಾ ಇನ್ನಷ್ಟು ದುಬಾರಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ