ಟಿಕೆಟ್​ ಇಲ್ಲದೆ ರೈಲಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದ 20 ಪೊಲೀಸರು: ದಂಡ ಕೇಳಿದ್ರೆ ಏನಂದ್ರು ಗೊತ್ತಾ?

TTE
Published on

ಲಖನೌ: ರೈಲಿನಲ್ಲಿ ಟಿಕೆಟ್​ ಇಲ್ಲದೆ ಪ್ರಯಾಣಿಸುತ್ತಿದ್ದ 20 ಪೊಲೀಸರು ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ)ನ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಶ್ರಮಜೀವಿ ಎಕ್ಸ್​ಪ್ರೆಸ್​ ರೈಲು ದೆಹಲಿಯಿಂದ ಬಿಹಾರದ ರಾಜ್​ಗಿರ್​ಗೆ ತೆರಳುತ್ತಿತ್ತು. ಈ ವೇಳೆ ಟಿಟಿಇ ಉತ್ತರ ಪ್ರದೇಶದ ಬರೇಲಿ ಮತ್ತು ಲಖನೌ ನಡುವೆ ಟಿಕೆಟ್​ ಪರೀಕ್ಷಿಸಲು ಬಂದಾಗ 20 ಪೊಲೀಸರು ಸಿಕ್ಕಿಬಿದ್ದಿದ್ದಾರೆ. ಕೆಲವು ದಿನಗಳ ಹಿಂದೆ ಯುಪಿ ಪೊಲೀಸ್​ ಕಾನ್ಸ್​ಟೇಬಲ್​​ ಒಬ್ಬರು ಲಖನೌದಲ್ಲಿರುವ ವಿಮಾರ್ಟ್​ನಲ್ಲಿ ಮೂರು ಶರ್ಟ್​ಗಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಟಿಕೆಟ್​ ಇಲ್ಲದೆ ಪ್ರಯಾಣಿಸುತ್ತಿದ್ದ ಪೊಲೀಸರು ಸಿಕ್ಕಿಬಿದ್ದಿರುವುದು ಪೊಲೀಸರ ಮೇಲಿನ ನಂಬಿಕೆ ಕುಸಿಯುವಂತೆ ಮಾಡಿದೆ.

ಟಿಟಿಇ ಪೊಲೀಸರನ್ನು ಹಿಡಿದಾಗ ದಂಡದಿಂದ ತಪ್ಪಿಸಿಕೊಳ್ಳಲು ಯೂನಿಫಾರ್ಮ್​ ತೋರಿಸುವ ಮೂಲಕ ಸಿಬ್ಬಂದಿ ಪೊಲೀಸ್​ ಇಲಾಖೆಗೆ ಕಪ್ಪು ಮಸಿ ಬಳಿದಿದ್ದಾರೆ. ಒಂದು ವೇಳೆ ನನ್ನನ್ನು ಹಿಡಿದರೆ ನಿಮ್ಮ ವಿರುದ್ಧ ಅನೇಕ ಪ್ರಕರಣಗಳನ್ನು ಬರೆಯುತ್ತೇನೆ. ನೀವು ಜೀವನ ಪೂರ್ತಿ ನನ್ನ ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಓರ್ವ ಪೊಲೀಸ್​ ಟಿಟಿಇಗೆ ಧಮ್ಕಿ ಹಾಕಿದ್ದಾರೆ. ಅಲ್ಲದೆ, ನೀವು ದಂಡವನ್ನು ಪಡೆದರೆ, ನೀವೇನು ರೈಲ್ವೆ ಸಚಿವರಾಗುವುದಿಲ್ಲ ಎಂದು ಮತ್ತೊರ್ವ ಟಿಟಿಇ ಕುರಿತು ವ್ಯಂಗ್ಯವಾಡಿದ್ದಾರೆ. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಇಡೀ ಘಟನೆಯನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಭಾರಿ ವೈರಲ್​ ಆಗಿದೆ.

ಪೊಲೀಸರ ಬೆದರಿಕೆಗಳು ರೈಲ್ವೆ ಸಿಬ್ಬಂದಿಯನ್ನು ವಿಚಲಿತಗೊಳಿಸಲಿಲ್ಲ. ಯಾರಿಗೂ ಬಗ್ಗದ ಟಿಟಿಇ ಎಲ್ಲರಿಂದಲೂ ದಂಡವನ್ನು ವಸೂಲಿ ಮಾಡಿಯೇ ಅಲ್ಲಿಂದ ಹೋಗಲು ಅವಕಾಶ ಮಾಡಿಕೊಟ್ಟರು. ರೈಲಿನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರು ಟಿಕೆಟ್​ ಇಲ್ಲದೆ ಪ್ರಯಾಣಿಸುತ್ತಿದ್ದರು. ಅದರಲ್ಲಿ 20 ಮಂದಿ ಪೊಲೀಸರೇ ಇದ್ದರು. ಎಲ್ಲರಿಂದ ಒಟ್ಟು 22,350 ರೂ. ದಂಡವನ್ನು ಸಂಗ್ರಹಿಸಲಾಗಿದೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ಪೊಲೀಸರ ನಡೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ತಪ್ಪು ಮಾಡುವ ಜನರನ್ನು ಹಿಡಿದು ಬುದ್ಧಿ ಹೇಳಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪೊಲೀಸರೇ ಹೀಗೆ ಮಾಡಿದರೆ ನಾವ್ಯಾರನ್ನು ನಂಬುವುದು ಎಂದು ಅನೇಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net