

ನವದೆಹಲಿ: ಸಾಮಾಜಿಕ ಮಾಧ್ಯಮ, ಓಟಿಟಿ ಮತ್ತು ಡಿಜಿಟಲ್ ಕಂಟೆಂಟ್ಗಳನ್ನು ನಿಯಂತ್ರಿಸಲು ಫೆಬ್ರವರಿ 25ರಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಘೋಷಿಸಿದೆ. ಇದರ ನಡುವೆ ಹೊಸ ಮಾರ್ಗಸೂಚಿಯ ಪ್ರಕಾರ ಮೂರು ತಿಂಗಳ ಒಳಗೆ ಎಲ್ಲ ಜಾಲತಾಣ ಖಾತೆಗಳನ್ನು ಸರ್ಕಾರದ ಐಡಿಯೊಂದಿಗೆ ಪರಿಶೀಲಿಸಿಕೊಳ್ಳಬೇಕು ಇಲ್ಲದಿದ್ದರೆ ಬ್ಲಾಕ್ ಆಗುತ್ತದೆ ಎಂಬ ಪೋಸ್ಟ್ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ಸಂದೇಶವನ್ನು ದೆಹಲಿ ಹೈಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಉಮ್ರಾವ್ ಸಹ ಅಧಿಕೃತ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳನ್ನು ತಮ್ಮ ಮೊಬೈಲ್ ಫೋನ್ ಮೂಲಕ ಸರ್ಕಾರದ ಐಡಿಯೊಂದಿಗೆ ಮೂರು ತಿಂಗಳ ಒಳಗೆ ಪರಿಶೀಲಿಸಿಕೊಳ್ಳಬೇಕು. ಇದೊಂದು ಸ್ವಾಗತಾರ್ಹ ನಡೆಯಾಗಿದೆ. ಇದೀಗ ಅಂತರ್ಜಾಲ ಸುರಕ್ಷಿತ ಮತ್ತು ಹೆಚ್ಚು ಜವಾಬ್ದಾರಿಯುತವಾಗಿದೆ. ಬಳಕೆದಾರರ ಹಕ್ಕುಗಳನ್ನು ರಕ್ಷಿಸಲು ಸರ್ಕಾರವು ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳನ್ನು ಘೋಷಣೆ ಮಾಡಿದೆ ಎಂದು ಉಮ್ರಾವ್ ಫೆ. 25ರಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ, ಇದೊಂದು ದಾರಿತಪ್ಪಿಸುವ ಸಂದೇಶವೆಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ. ಜಾಲತಾಣ ಖಾತೆಗಳ ಪರಿಶೀಲನೆ ಕಡ್ಡಾಯವೆಂದು ಸರ್ಕಾರ ಹೇಳಿಲ್ಲ. ಬದಲಾಗಿ ತಮ್ಮ ಖಾತೆಗಳನ್ನು ಸ್ವಯಂಪ್ರೇರಣೆಯಿಂದ ಪರಿಶೀಲಿಸಲು ಬಯಸುವ ಬಳಕೆದಾರರಿಗೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸರ್ಕಾರ ಕೇಳಿದೆ.
ಹರಿದಾಡುತ್ತಿರುವ ತಪ್ಪು ಸಂದೇಶವುಳ್ಳ ಪೋಸ್ಟ್ ಕುರಿತಾದ ನಂಬಲಾರ್ಹ ಯಾವುದೇ ನ್ಯೂಸ್ ದೊರೆತಿಲ್ಲ. ಮೂರು ತಿಂಗಳ ಒಳಗೆ ಜಾಲತಾಣ ಖಾತೆಗಳನ್ನು ಪರಿಶೀಲಿಸಬೇಕೆಂದು ಸರ್ಕಾರ ಹೇಳಿರುವ ಬಗ್ಗೆಯು ಯಾವುದೇ ಖಚಿತ ವರದಿ ದೊರೆತಿಲ್ಲ. ಆದರೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನೂತನ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ಗಳನ್ನು ಘೋಷಣೆ ಮಾಡಲಾಗಿದೆ.
ಖಾತೆಗಳ ಪರಿಶೀಲನೆ ಬಗ್ಗೆ ರವಿಶಂಕರ್ ಪ್ರಸಾದ್ ಅವರು ಮಾತನಾಡಿರುವ ವಿಡಿಯೋವನ್ನು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಆಫ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿದೆ. ವಿಡಿಯೋದಲ್ಲಿ ಇರುವಂತೆ ತಮ್ಮ ಖಾತೆಗಳನ್ನು ಸ್ವಯಂಪ್ರೇರಣೆಯಿಂದ ಪರಿಶೀಲಿಸಲು ಬಯಸುವ ಬಳಕೆದಾರರಿಗೆ ಅವರ ಖಾತೆಗಳನ್ನು ಪರಿಶೀಲಿಸಲು ಸೂಕ್ತವಾದ ಕಾರ್ಯವಿಧಾನವನ್ನು ಒದಗಿಸಲಾಗುತ್ತದೆ ಮತ್ತು ಪರಿಶೀಲನೆಯ ಮಾಡಬಹುದಾದ ಮತ್ತು ಗೋಚರಿಸುವ ಗುರುತಗಳನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸ್ವಯಂಪ್ರೇರಿತ ಪರಿಶೀಲನಾ ಕಾರ್ಯವಿಧಾನವನ್ನು ಹೊಂದಿರಬೇಕೆಂದು ಪ್ರಸಾದ್ ಹೇಳುವುದನ್ನು ಕೇಳಬಹುದು. ಆದರೆ, ಎಲ್ಲಿಯೂ ಖಾತೆಗಳ ಪರಿಶೀಲನೆ ಕಡ್ಡಾಯವೆಂದು ಪ್ರಸಾದ್ ಅವರು ಹೇಳಿಲ್ಲ. ಅನೇಕ ಮಾಧ್ಯಮಗಳು ಹೊಸ ಮಾರ್ಗಸೂಚಿಯ ಬಗ್ಗೆ ವರದಿ ಮಾಡಿದ್ದು, ಯಾವುದೇ ವರದಿಯಲ್ಲೂ ಜಾಲತಾಣ ಖಾತೆಗಳ ಪರಿಶೀಲನೆ ಕಡ್ಡಾಯವೆಂದು ಉಲ್ಲೇಖವಾಗಿಲ್ಲ.
ಕೊನೆಯದಾಗಿ ತಿಳಿಯುವುದೇನೆಂದರೆ ಮೂರು ತಿಂಗಳ ಒಳಗೆ ಜಾಲತಾಣ ಖಾತೆಗಳನ್ನು ಪರಿಶೀಲಿಸದಿದ್ದರೆ ಖಾತೆಗಳು ರದ್ದಾಗುತ್ತವೆ ಎಂಬುದು ಸುಳ್ಳು. ವೈರಲ್ ಪೋಸ್ಟ್ ಹಿಂದೆ ಅಪಪ್ರಚಾರದ ಉದ್ದೇಶವಿದೆ. ಜಾಲತಾಣ ಖಾತೆಗಳ ಪರಿಶೀಲನೆಗೆ ಸ್ವಯಂಪ್ರೇರಿತ ಪರಿಶೀಲನಾ ಕಾರ್ಯವಿಧಾನವಿರಲಿದೆ ಹೊರತು ಕಡ್ಡಾಯವೇನಿಲ್ಲ ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ. (ಏಜೆನ್ಸೀಸ್)