

ಟೈಫ್: ಮಿನಿಬಸ್ ಕಂದಕಕ್ಕೆ ಉರುಬಿದ್ದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸ್ ದಾರುಣವಾಗಿ ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ತೈಫ್ನಲ್ಲಿ ನಡೆದಿದೆ.
ಮೃತರನ್ನು ಕೇರಳದ ವೈಕೊಮ್ ವಂಚಿಯೂರ್ ನಿವಾಸಿ ಅಖಿಲಾ (29) ಮತ್ತು ಕೊಲ್ಲಂ ನಿವಾಸಿ ಸುಬಿ (33) ಎಂದು ಗುರುತಿಸಲಾಗಿದೆ. ರಿಯಾದ್ನಿಂದ ಜೆದ್ದಾಗೆ ಪ್ರಯಾಣ ಬೆಳೆಸಿದ್ದ ಮಿನಿಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ದುರ್ಘಟನೆ ಸಂಭವಿಸಿದೆ.
ರಿಯಾದ್ನಲ್ಲಿ ತಮ್ಮ ಕ್ವಾರಂಟೈನ್ ಪೂರ್ಣಗೊಳಿಸಿ ಜೆದ್ದಾದಲ್ಲಿರುವ ವಸತಿ ನಿಲಯಕ್ಕೆ ನರ್ಸ್ಗಳು ತೆರಳುವಾಗ ಅಪಘಾತ ನಡೆದಿದೆ. ಕೇರಳದ ಇನ್ನಿಬ್ಬರು ನರ್ಸ್ಗಳಾದ ಆ್ಯನ್ಸಿ ಮತ್ತು ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡಿದ್ದು, ತೈಫ್ನ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವು ಭಾನುವಾರ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ. ಮಿನಿಬಸ್ ಚಾಲಕ ನಿದ್ರೆಗೆ ಜಾರಿದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. (ದಿಗ್ವಿಜಯ ನ್ಯೂಸ್)