ಆಗಲ್ಲ ಎಂದಿದ್ದಕ್ಕೆ ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಪ್ರಿಯಕರ

Lover Murder
Published on

ಬೆಂಗಳೂರು: ಸಹಜೀವನ ನಡೆಸುತ್ತಿದ್ದ ಪ್ರೇಮಿಗಳ ನಡುವೆ ಮದುವೆಯಾಗುವ ವಿಚಾರಕ್ಕೆ ಗಲಾಟೆಯಾಗಿದ್ದು, ದೋಸೆ ತಯಾರಿಸುವ ತವಾದಿಂದ ಹೊಡೆದು ಪ್ರಿಯತಮೆಯನ್ನು ಹತ್ಯೆ ಮಾಡಿದ ಪ್ರಿಯಕರ, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಚಿಕ್ಕಮಗಳೂರಿನ ತರೀಕೆರೆ ಮೂಲದ ನಯನಾ (25) ಕೊಲೆಯಾದ ಯುವತಿ. ಕೃತ್ಯ ಎಸಗಿದ ಪಾವಗಡ ಮೂಲದ ತಿಪ್ಪೇಸ್ವಾಮಿಯನ್ನು (26)ವಿಚಾರಣೆಗೆ ಒಳಪಡಿಸಲಾಗಿದೆ ಮಾರತ್ತಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ನಯನಾ ದಿನಸಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಳು. ತಿಪ್ಪೇಸ್ವಾಮಿ ಕ್ಯಾಬ್ ಚಾಲಕನಾಗಿದ್ದ. 8 ತಿಂಗಳ ಹಿಂದೆ ನಯನಾ ಕ್ಯಾಬ್ ಹತ್ತಿದ್ದಾಗ ತಿಪ್ಪೇಸ್ವಾಮಿ ಜತೆ ಸ್ನೇಹ ಬೆಳೆದಿತ್ತು. ನಂತರ ಪ್ರೀತಿಗೆ ತಿರುಗಿದ್ದು, ನಾಲ್ಕು ತಿಂಗಳಿಂದ ಮುನ್ನೇಕೊಳಾಲದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಹಜೀವನ ನಡೆಸುತ್ತಿದ್ದರು.

ಬುಧವಾರ (ಮೇ 19) ರಾತ್ರಿ ತಿಪ್ಪೇಸ್ವಾಮಿ ಮದುವೆಯಾಗೋಣ ಎಂದು ಯುವತಿಯನ್ನು ಕೇಳಿದ್ದ. ಈ ವೇಳೆ ಆಕೆ, ‘ನಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದೇನೆ, ನಿನ್ನನ್ನು ಮದುವೆಯಾಗುವುದಿಲ್ಲ’ ಎಂದು ಹೇಳಿದ್ದಾಳೆ. ಇದೇ ವಿಚಾರಕ್ಕೆ ಮರುದಿನ ಬೆಳಗ್ಗೆ ಇಬ್ಬರ ನಡುವೆ ಗಲಾಟೆಯಾಗಿದೆ. ಸಿಟ್ಟುಗೊಂಡ ನಯನಾ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ತಿಪ್ಪೇಸ್ವಾಮಿಯ ಕೈ ಬೆರಳಿಗೆ ಗಾಯವಾಗಿದ್ದು, ಚಾಕು ಕಸಿದುಕೊಂಡಿದ್ದಾನೆ. ಬಳಿಕ ದೋಸೆ ತವಾದಿಂದ ಹೊಡೆದಿದ್ದಾಳೆ. ಇದಕ್ಕೆ ಆಕ್ರೋಶಗೊಂಡ ತಿಪ್ಪೇಸ್ವಾಮಿ, ಅದೇ ತವಾ ಕಸಿದುಕೊಂಡು 3-4 ಬಾರಿ ನಯನಾಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗಾಯಗೊಂಡು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೃತ್ಯದ ಬಳಿಕ ತಿಪ್ಪೇಸ್ವಾಮಿ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net