

ಬೆಂಗಳೂರು: ಲವ್ ಫೇಲ್ಯೂರ್ ಬಗ್ಗೆ ಕನ್ನಡದಲ್ಲಿ ಇದುವರೆಗೂ ಸಾಕಷ್ಟು ಹಾಡುಗಳು ಬಂದಿವೆ. ಇದೀಗ ಈ ಸಾಲಿಗೆ ಒಂದು ವೀಡಿಯೋ ಸಾಂಗ್ ಸಹ ಸೇರಿಕೊಂಡಿದೆ. ಅದೇ 'ಲವ್ಗುರು'.
ಲಹರಿ ಮ್ಯೂಸಿಕ್ ಸಂಸ್ಥೆಯು ಇದೀಗ ಲಹರಿ ಒರಿಜಿನಲ್ ಎಂಬ ಹೊಸ ವಿಭಾಗ ಪ್ರಾರಂಭಿಸಿದ್ದು, ಇದರಡಿ ಯೂಟ್ಯೂಬ್ನಲ್ಲಿ ವೀಡಿಯೋ ಸಿಂಗಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಮೊದಲ ಹಂತವಾಗಿ, 'ಲವ್ಗುರು' ಎಂಬ ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ.
ಈ ಹಿಂದೆ 'ಕೆಜಿಎಫ್' ಚಿತ್ರದಲ್ಲಿ ರಾಜೇಂದ್ರ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿ ಲಕ್ಷ್ಮಣ್ ಈ ಹಾಡನ್ನು ಹಾಡಿದ್ದಾರೆ. ಇನ್ನು 'ಲವ್ಗುರು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ತರುಣ್ ಚಂದ್ರ ಬಹಳ ವರ್ಷಗಳ ನಂತರ ಮತ್ತೆ ಈ ಹಾಡಿನ ಮೂಲಕ ಎಂಟ್ರಿ ಕೊಟ್ಟರೆ, ಲಹರಿ ಮ್ಯೂಸಿಕ್ನ ನವೀನ್ ಮನೋಹರನ್ ಇದನ್ನು ಲಹರಿ ಒರಿಜಿನಲ್ ಮೂಲಕ ನಿರ್ಮಿಸಿದ್ದಾರೆ.
ಇತ್ತೀಚೆಗೆ, 'ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ ...' ಎಂಬ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದೆ. ಸಿನಿಮಾ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಗಣೇಶ್ ಪಾಪಣ್ಣ ಈ ಹಾಡನ್ನು ನಿರ್ದೇಶಿಸಿದ್ದಾರೆ.
ಸುಮಾರು ಮೂರೂವರೆ ತಿಂಗಳ ಹಿಂದೆ ಒಂದು ಆಲ್ಬಂ ಸಾಂಗ್ ನಿರ್ಮಿಸುವ ಐಡಿಯಾ ಅವರಿಗೆ ಬಂತಂತೆ. 'ಎಲ್ವಿನ್ ಜೋಷ್ವಾ ಒಂದು ಟ್ಯೂನ್ ಕಳಿಸಿದರು. ನಾನದನ್ನು ನವೀನ್ ಅವರಿಗೆ ಕಳಿಸಿದೆ. ತಕ್ಷಣ ಇದನ್ನು ವಿಡಿಯೋ ಆಲ್ಬಂ ಆಗಿ ರೂಪಿಸೋಣ ಅಂದರು. ನಟಿ ನುತಶ್ರೀ ಜಗತಪ್ ಈ ಹಾಡಿನಲ್ಲಿ ನಟಿಸಿದ್ದಾರೆ. ಎಂಟು ಸೆಕೆಂಡುಗಳಷ್ಟೇ ಅವರ ಪಾತ್ರವಿತ್ತು. ಆದರೂ ಬೆಂಗಳೂರಿಗೆ ಬಂದು ಖುಷಿಯಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಅಷ್ಟು ದೂರದಿಂದ ಬಂದರು ಎನ್ನುವ ಕಾರಣಕ್ಕೆ ಮತ್ತೆ ಎಂಟು ಸೆಕೆಂಡುಗಳನ್ನು ಹೆಚ್ಚಿಗೆ ಮಾಡಲಾಯಿತು. 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ಮಸಲ್ ಮಣಿ ಪಾತ್ರದಲ್ಲಿ ಕಾಣಿಸಿಕೊಂಡು, ಈಗ ಜನಪ್ರಿಯತೆ ಪಡೆದಿರುವ ಮಹಂತೇಶ್ ಕೂಡಾ ಈ ಹಾಡಿನಲ್ಲಿದ್ದಾರೆʼಎಂದು ವಿವರಣೆ ನೀಡುತ್ತಾರೆ ಗಣೇಶ್.
ಐದು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ತರುಣ್, ಒಂದೊಳ್ಳೆಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರುಪ್ರವೇಶ ಮಾಡಬೇಕು ಎಂದು ಕಾದಿದ್ದರಂತೆ. ಆ ಸಂದರ್ಭದಲ್ಲಿ ಗಣೇಶ್ ಪಾಪಣ್ಣ ಅವರು ಈ ಸಾಂಗ್ ನಲ್ಲಿ ಪಾತ್ರ ನಿರ್ವಹಿಸುವಂತೆ ಕೇಳಿದ್ದಿಕ್ಕೆ ಒಪ್ಪಿಕೊಂಡು ನಟಿಸಿದ್ದಾಗಿ ತರುಣ್ ಹೇಳುತ್ತಾರೆ.