

ಮುಂಬೈ: ನಿರ್ದೇಶಕ ರಾಮ್ಗೋಪಾಲ್ ವರ್ಮ ನಿಟ್ಟುಸಿರುಬಿಟ್ಟಿದ್ದಾರೆ. ಕಾರಣ, ಈ ಹಿಂದೆ ನೆಲಗೊಂಡಾ ನ್ಯಾಯಾಲಯವು ಚಿತ್ರವನ್ನು ಸದ್ಯಕ್ಕೆ ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿತ್ತು. ಈಗ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನ್ಯಾಯಾಲಯವು ಒಪ್ಪಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ.
ರಾಮ್ಗೋಪಾಲ್ ವರ್ಮಾ ಒಂದು ನೈಜ ಘಟನೆಯನ್ನಾಧರಿಸಿ, 'ಮರ್ಢರ್' ಎನ್ನುವ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಟ್ರೈಲರ್ ಸಹ ಬಿಡುಗಡೆಯಾಗಿತ್ತು. ಇನ್ನೇನು ಚಿತ್ರ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ, ತಮ್ಮ ಅನುಮತಿಯನ್ನೇ ಪಡೆಯದೇ ತಮ್ಮ ಜೀವನವನ್ನಾಧರಿಸಿ ಚಿತ್ರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಅಮೃತಾ ಎನ್ನುವವರು ನಲಗೊಂಡಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ವಿಷಯವಾಗಿ ನ್ಯಾಯಾಲಯವು ವರ್ಮಾ ಮತ್ತು ತಂಡದವರ ವಿಚಾರಣೆ ನಡೆಸುವುದರ ಜತೆಗೆ, ಪೂರ್ತಿ ವಿಚಾರಣೆಯಾಗುವವರೆಗೂ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಚಿತ್ರವನ್ನು ತಕ್ಷಣ ಬಿಡುಗಡೆ ಮಾಡಿ ಒಂದಿಷ್ಟು ದುಡ್ಡು ಮಾಡಿಕೊಳ್ಳಬೇಕು ಎಂದು ಕಾದಿದ್ದ ಆರ್ಜಿವಿ ಕನಸಿಗೆ ಇದೀಗ ತಣ್ಣೀರೆರಚಿದಂತಾಗಿತ್ತು.
ಈಗ ಈ ಕುರಿತಾಗಿ ನ್ಯಾಯಾಲಯವು ವರ್ಮ ಅವರಿಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿದೆ. ಆದರೆ, ಒಂದು ಷರತ್ತನ್ನೂ ವಿಧಿಸಿದೆ. ಆ ಷರತ್ತನ್ನು ಪೂರ್ಣಗೊಳಿಸಿದರೆ ಮಾತ್ರ ವರ್ಮ ಅವರಿಗೆ ಚಿತ್ರ ಬಿಡುಗಡೆ ಮಾಡುವ ಅವಕಾಶ ನೀಡಲಾಗುತ್ತದೆ. ಇಷ್ಟಕ್ಕೂ ಆ ಷರತ್ತೇನು ಎಂದರೆ, ಇದು ನೈಜ ಘಟನೆಯಾದ್ದರಿಂದ ಮತ್ತು ಪಾತ್ರಧಾರಿಗಳ ಹೆಸರುಗಳನ್ನು ಕೇಳಿದರೆ, ಯಾವ ಘಟನೆ ಎಂದು ಊಹಿಸಲು ಸಾಧ್ಯವಿರುವುದರಿಂದ, ಪಾತ್ರಧಾರಿಗಳ ಹೆಸರುಗಳನ್ನು ಬದಲಾಯಿಸಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ: ಅಪ್ಪ ಮಗನ ಕೃಷಿ ಪ್ರೀತಿ; ಸೈಫ್ ಜತೆ ಜಮೀನಿನಲ್ಲಿ ನೀರು ಹಾಯಿಸ್ತಿದ್ದಾನೆ ತೈಮೂರ್
ಇದಕ್ಕೆ ವರ್ಮ ಒಪ್ಪಿರುವುದಷ್ಟೇ ಅಲ್ಲ, ನ್ಯಾಯಾಲಯಕ್ಕೆ ಟ್ವೀಟ್ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 'ನಮ್ಮ ಒಳ್ಳೆಯ ಉದ್ದೇಶಗಳನ್ನು ನ್ಯಾಯಾಲಯವು ಅರ್ಥ ಮಾಡಿಕೊಂಡು, ಒಂದು ಷರತ್ತಿನೊಂದಿಗೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿದೆ. ಹೆಚ್ಚಿನ ವಿವರಗಳು ಸದ್ಯದಲ್ಲೇ ಎಲ್ಲರಿಗೂ ಸಿಗಲಿದೆ' ಎಂದು ವರ್ಮ ಹೇಳಿದ್ದಾರೆ.