

ಧಾರವಾಡ: ಮಹಿಳೆ, ಮಕ್ಕಳು, ಪುರುಷರಾದಿಯಾಗಿ ಎಲ್ಲರ ಮುಖದಲ್ಲೂ ನಿರಾಶಭಾವ.. ಒತ್ತರಿಸಿ ಬರುತ್ತಿದ್ದ ದುಃಖ ತಡೆಯಲಾಗದ ಸ್ಥಿತಿಯಲ್ಲೇ ಸಾಲುಸಾಲಾಗಿ ಮೃತರ ಫೋಟೋಗಳನ್ನ ಇಟ್ಟು ಪೂಜೆ ಸಲ್ಲಿಸುತ್ತಾ ಬಿಕ್ಕಿಬಿಕ್ಕಿ ಅಳುತ್ತಿದ್ದರು... ಇದು ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬೈಪಾಸ್ ಬಳಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ದೃಶ್ಯ.
ಸಂಕ್ರಾಂತಿ ಹಬ್ಬದ ಮರುದಿನ(ಜ.15) ಧಾರವಾಡದ ಬೈಪಾಸ್ನಲ್ಲಿ ಟಿಟಿ ಮತ್ತು ಟಿಪ್ಪರ್ ನಡುವೆ ಸಂಭವಿಸಿದ್ದ ಭೀಕರ ಅಪಘಾತ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಈ ಅಪಘಾತದಲ್ಲಿ ದಾವಣಗೆರೆ ಮೂಲದ 10 ಮಹಿಳೆಯರು ಸೇರಿ 12 ಜನ ಮೃತಪಟ್ಟಿದ್ದರು. ಅಂದು ಅಮಾಯಕರ ರಕ್ತ ಹರಿದು ಹೋಗಿದ್ದ ಅದೇ ಸ್ಥಳದಲ್ಲಿ ಇವತ್ತು(ಭಾನುವಾರ) ಕಣ್ಣೀರ ಧಾರೆ ಹರಿದಿದೆ. ಇದನ್ನೂ ಓದಿರಿ ಧಾರವಾಡದಲ್ಲಿ ಅಪಘಾತಕ್ಕೆ 13 ಬಲಿ: ಪ್ರತಿ ಜನವರಿ ಇದೇ ಜಾಗದಲ್ಲಿ ನಡೆಯುತ್ತೆ ಭೀಕರ ಆಕ್ಸಿಡೆಂಟ್!
ಗೋವಾ ಪ್ರವಾಸಕ್ಕೆ ಹೊರಟಿದ್ದ ಬಾಲ್ಯ ಸ್ನೇಹಿತೆಯರು ಒಟ್ಟಾಗಿಯೇ ಬಾರದ ಲೋಕಕ್ಕೆ ಹೋದ ಈ ಅಪಘಾತ ಪ್ರಕರಣ ಇಂದಿಗೂ ಮರೆಯಲಾಗಲಾದ ಕಹಿ ಘಟನೆಯಾಗಿಯೇ ಉಳಿದುಕೊಂಡಿದೆ. ತಮ್ಮವರನ್ನು ಕಳೆದುಕೊಂಡ ಬಳಿಕ ಕುಟುಂಬ ಸದಸ್ಯರು, ನಮ್ಮಂತೆ ಮತ್ತೊಬ್ಬರಿಗೆ ಇಂತಹ ಸ್ಥಿತಿ ಬಾರದಿರಲಿ ಎಂಬ ಕಾಳಜಿಯೊಂದಿಗೆ ಘಟನಾ ಸ್ಥಳಕ್ಕೆ ಬಂದು ಪ್ರತಿಭಟನೆ ದಾಖಲಿಸೋ ಕಾರ್ಯ ಮಾಡಿದ್ದಾರೆ. ಇನ್ನಾದ್ರೂ ಜನಪ್ರತಿನಿಧಿಗಳು ಈ ರಸ್ತೆ ಅಗಲೀಕರಣಕ್ಕೆ ನಿಜವಾದ ಕಾಳಜಿ ತೋರುವರೇ? ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್)