

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯಿಂದ ಖದರ್ ಕಳೆದುಕೊಂಡು ಕಳಾಹೀನವಾಗಿದ್ದ ಲೋಕಾಯುಕ್ತಕ್ಕೆ ಸೋಮವಾರ ಹಳೇ ಕಳೆ ಮರುಕಳಿಸಿದ್ದು, ಅದು ಮತ್ತೆ ಶಕ್ತಿಯುತವಾದ ಮೊದಲ ದಿನವೇ ಭ್ರಷ್ಟರ ಬೇಟೆ ಆರಂಭವಾಗಿದೆ. ಅದರಲ್ಲೂ ಮೊದಲ ದಿನವೇ ಜಂಟಿ ಆಯುಕ್ತರೊಬ್ಬರು 4 ಲಕ್ಷ ರೂ. ನಗದು ಸಹಿತ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಇಂದು ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಅವರ ಆಪ್ತ ಸಹಾಯಕ 4 ಲಕ್ಷ ರೂ. ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ.
ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಂಟಿ ಆಯುಕ್ತರ ಪಿ.ಎ. ಹಣ ಸಮೇತ ಸಿಕ್ಕಿಬಿದ್ದಿದ್ದು, ಖಾತೆ ಬದಲಾವಣೆ ವಿಚಾರಕ್ಕೆ ಲಂಚ ಪಡೆಯುತ್ತಿದ್ದ ಆರೋಪ ಎದುರಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ಎಂಟು ಅಧಿಕಾರಿಗಳಿಂದ ದಾಳಿ ನಡೆದಿದ್ದು, ಹಣ ಕೈಯಲ್ಲಿ ಹಿಡಿದುಕೊಂಡೇ ಪಿ.ಎ. ಸಿಕ್ಕಿಬಿದ್ದಿದ್ದಾರೆ. ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.