ಭ್ರಷ್ಟರ ಶಿಕಾರಿಗೆ ಲೋಕಾ ತಯಾರಿ: ಎಸಿಬಿ ಸಿಬ್ಬಂದಿ, ಕಡತಗಳ ಹಸ್ತಾಂತರ ಇಂದು ಪೂರ್ಣ

lokayuktha
Published on

| ಮಂಜುನಾಥ ಕೆ. ಬೆಂಗಳೂರು

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಿಂದ ಖದರ್ ಕಳೆದುಕೊಂಡು ಮಂಕಾಗಿದ್ದ ಲೋಕಾಯುಕ್ತಕ್ಕೀಗ ಹಳೇ ಖದರ್ ಮರಳಿದೆ. ಸೋಮವಾರದಿಂದ ಭ್ರಷ್ಟರ ಶಿಕಾರಿ ಮತ್ತೆ ಶುರುವಾಗಲಿದೆ. ಎಸಿಬಿಯಲ್ಲಿದ್ದ 141ಕ್ಕೂ ಹೆಚ್ಚು ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳು ಈಗಾಗಲೇ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಎಲ್ಲ ಪ್ರಕರಣಗಳ ಕಡತಗಳೂ ಲೋಕಾಯುಕ್ತ ಸುಪರ್ದಿಗೆ ಸೇರಿ ಎಸಿಬಿ ಸಂಪೂರ್ಣ ಇತಿಹಾಸ ಸೇರಲಿದೆ. ಏತನ್ಮಧ್ಯೆ ಎಸಿಬಿ ದಾಳಿಗೊಳಗಾದರೂ ನಿರಾಳರಾಗಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಲೋಕಾಯುಕ್ತ ಭೀತಿ ಶುರುವಾಗಿದೆ.

ಎಸಿಬಿ ಸ್ಥಾಪನೆಯಾದ 2016ರಿಂದ 2022ರ ಜೂನ್​ವರೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ 2,121 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,034 ಪ್ರಕರಣಗಳು ತನಿಖಾ ಹಂತದಲ್ಲಿವೆ. ಉಳಿದ ಪ್ರಕರಣಗಳಲ್ಲಿ ಕೆಲವಕ್ಕೆ ಕ್ಲೀನ್​ಚಿಟ್ ಕೊಟ್ಟಿದ್ದರೆ, ಕೆಲ ಪ್ರಕರಣಗಳಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಿ ವಿಚಾರಣೆ ನಡೆಯುತ್ತಿದೆ. ಈಗ ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ, ತನಿಖಾ ಹಂತದ ಸ್ಥಿತಿ ಪರಿಶೀಲನೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಲೋಕಾಯುಕ್ತದಲ್ಲಿ ಈ ಮೊದಲು ದಾಖಲಾಗಿದ್ದ 350ಕ್ಕೂ ಅಧಿಕ ಪ್ರಕರಣ ಬಾಕಿ ಇವೆ. ಈಗ ಎಸಿಬಿಯಲ್ಲಿರುವ ಪ್ರಕರಣಗಳೂ ವರ್ಗಾವಣೆಯಾಗುತ್ತಿರುವುದರಿಂದ 1400 ಕೇಸ್​ಗಳ ತನಿಖೆ ಮತ್ತು ವಿಚಾರಣೆ ಶುರುವಾಗಲಿದೆ.

ಕೆಳಹಂತದ ಹುದ್ದೆಗಳಷ್ಟೇ ವರ್ಗ: ಎಸಿಬಿಯಲ್ಲಿ ಎಡಿಜಿಪಿ ಸೇರಿ 322 ಹುದ್ದೆಗಳಿವೆ. ಒಬ್ಬರು ಐಜಿಪಿ, 10 ಎಸ್ಪಿಗಳು, 35 ಹೆಚ್ಚುವರಿ ಎಸ್ಪಿಗಳು, 75 ಇನ್​ಸ್ಪೆಕ್ಟರ್​ಗಳು ಮತ್ತು 200 ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳ ಹುದ್ದೆಗಳಿವೆ. ಸದ್ಯ ಕೆಳಹಂತದ ಸಿಬ್ಬಂದಿ ಮಾತ್ರ ಲೋಕಾಯುಕ್ತಕ್ಕೆ ನಿಯೋಜಿಸಿದ್ದು, ಮೇಲಿನ ಹಂತದ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯೂ ಶೀಘ್ರವೇ ಆರಂಭವಾಗಲಿದೆ.

ಲೋಕಾಯುಕ್ತಕ್ಕೆ ಒಟ್ಟಾರೆ ಗ್ರೂಪ್ ಎ, ಬಿ, ಸಿ, ಡಿ ಕೆಟಗರಿಯ 1,403 ಹುದ್ದೆಗಳು ಮಂಜೂರಾಗಿವೆ. ಸದ್ಯ 430ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಎಸಿಬಿಯಿಂದ ಬಂದಿರುವ ಪೊಲೀಸ್ ಕಾನ್​ಸ್ಟೆಬಲ್​ಗಳಿಂದ ಬಹುತೇಕ ಹುದ್ದೆಗಳು ಭರ್ತಿಯಾಗಿವೆ. ಗುಮಾಸ್ತ, ಸಹಾಯಕರು, ಸ್ವೀಪರ್ಸ್, ಸ್ಟೆನೋಗ್ರಾಫರ್ಸ್ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ.

ಎಸಿಬಿ ಅಧಿಕಾರ ಹೇಗಿತ್ತು?: ಎಸಿಬಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ತನಿಖೆಯನ್ನು ಸರ್ಕಾರಿ ಅಧಿಕಾರಿಗಳ ಮಟ್ಟಕ್ಕೆ ಸೀಮಿತಗೊಳಿಸಿತ್ತು. ರಾಜಕಾರಣಿಗಳ ವಿರುದ್ಧದ ದೂರುಗಳ ತನಿಖೆ ಕಷ್ಟ ಕಷ್ಟ ಎನ್ನುವಂತಾಗಿತ್ತು. 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನಿರ್ಧಾರದ ಅನ್ವಯ ಎಸಿಬಿ ರಚನೆ ಬಳಿಕ ಲೋಕಾಯುಕ್ತವು ದೂರುಗಳನ್ನು ಮಾತ್ರ ಸ್ವೀಕರಿಸಿ ತನಿಖೆ ನಡೆಸಲು ಎಸಿಬಿಗೆ ಸೂಚಿಸಬೇಕಿತ್ತು.

ಎಸಿಬಿಯ ಪ್ರಮುಖ ಕೇಸ್​ಗಳು

  • ಬೆಂಗಳೂರು ಮಾಜಿ ಡಿಸಿ ಮಂಜುನಾಥ್ ವಿರುದ್ಧ ಲಂಚ ಸ್ವೀಕಾರ ಪ್ರಕರಣ
  • ಬಿಡಿಎ ಇಂಜಿನಿಯರ್​ಗಳು, ಕೆಐಎಡಿಬಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣ
  • ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು, ಆರ್​ಟಿಒ ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ
  • ವಿಧಾನಸೌಧದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪ್ರಕರಣ
  • ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನ ಹಂಚಿಕೆ ಮಾಡಿದ್ದ ಬಹೃತ್ ಹಗರಣ
  • ರಾಜಕಾರಣಿಗಳ ವಿರುದ್ಧ ಸರ್ಕಾರಿ ಜಮೀನು ಡಿ ನೋಟಿಫಿಕೇಷನ್ ಪ್ರಕರಣಗಳು

ಸೋಮವಾರ ಉಪ ಲೋಕಾಯುಕ್ತ ಮತ್ತು ಎಡಿಜಿಪಿ ಜತೆ ಸಭೆ ನಡೆಸುವ ಆಲೋಚನೆ ಇದೆ. ಲೋಕಾಯುಕ್ತದ ಮುಂದಿನ ಕಾರ್ಯಾಚರಣೆಯ ಬಗ್ಗೆ ರ್ಚಚಿಸಿ, ಕ್ರಮ ಕೈಗೊಳ್ಳಲಾಗುವುದು.

| ನ್ಯಾ.ಬಿ.ಎಸ್. ಪಾಟೀಲ್ ಲೋಕಾಯುಕ್ತ

ಹೇಗಿರಲಿದೆ ಕಾರ್ಯ ನಿರ್ವಹಣೆ?: ನ್ಯಾಯಾಲಯ, ಚುನಾವಣಾ ಆಯೋಗದಂತೆ ಲೋಕಾಯುಕ್ತವೂ ಸ್ವಾಯತ್ತ ಸಂಸ್ಥೆ. ಇದಕ್ಕೆ ಯಾರ ನಿಯಂತ್ರಣವೂ ಇರುವುದಿಲ್ಲ. ಲೋಕಾಯುಕ್ತರ ಪೊಲೀಸರಿಗೆ ಲೋಕಾಯುಕ್ತ ಕಾಯ್ದೆ ಸೆಕ್ಷನ್ 15ರ ಪ್ರಕಾರ ಭ್ರಷ್ಟಾಚಾರ ಆರೋಪ ಎದುರಿಸುವ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಮತ್ತು ಸಿಎಂ ಸೇರಿ ಎಲ್ಲ ಪ್ರಭಾವಿಗಳ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರ ಹೊಂದಿದ್ದಾರೆ.

ಸಿಬ್ಬಂದಿ ನೀಡಿದರೆ ಸಲಾಂ ಹೇಳುವೆ

ಧಾರವಾಡ: ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ಮಾತ್ರ ಕೊಟ್ಟರೆ ಸಾಲದು. ಅಗತ್ಯ ಸಿಬ್ಬಂದಿಯನ್ನೂ ನೀಡಿದರೆ ಸರ್ಕಾರಕ್ಕೆ ಸಲಾಂ ಹೇಳುವೆ. ಲೋಕಾಯುಕ್ತದ ಕಾಯ್ದೆಗೆ ಕೆಲ ತಿದ್ದುಪಡಿಗಳು ಆಗಬೇಕು. ಈ ಹಿಂದೆ ಇದ್ದ ಅಧಿಕಾರಗಳನ್ನು ಮತ್ತೆ ಕೊಡಬೇಕು. ಈ ನಿಟ್ಟಿನಲ್ಲಿ ತಿದ್ದುಪಡಿಗೆ ಸಲಹೆ ಕೇಳಿದರೆ ಕೊಡುವೆ ಎಂದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net