

ಪಟನಾ: ದೇಶದಲ್ಲಿ ಕರೊನಾ ಸೋಂಕಿನ ತೀವ್ರತೆ ಹೆಚ್ಚಲಾರಂಭಿಸಿದ್ದು, ರಾಜ್ಯಗಳು ರಾಜ್ಯವ್ಯಾಪಿ ಲಾಕ್ಡೌನ್ ಹೋಗಲಾರಂಭಿಸಿವೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಈಗಾಗಲೇ ಲಾಕ್ಡೌನ್ ಜಾರಿಯಲ್ಲಿದೆ. ಇದೀಗ ಬಿಹಾರದಲ್ಲಿಯೂ ಲಾಕ್ಡೌನ್ ಮಾಡುವುದಾಗಿ ಸರ್ಕಾರ ಘೋಷಿಸಿದೆ.
ಸಂಪುಟ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಅವರೆಲ್ಲರ ಸಲಹೆಯ ಆಧಾರದ ಮೇರೆಗೆ ರಾಜ್ಯದಲ್ಲಿ ಮೇ 15ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರದಂದು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಮಾರ್ಗಸೂಚಿ ತಯಾರಿಸಲಾಗುತ್ತಿದ್ದು, ಶೀಘ್ರವೇ ಅದನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಬಿಹಾರದಲ್ಲಿ ಸೋಮವಾರ 11,407 ಜನರಲ್ಲಿ ಕರೊನಾ ದೃಢವಾಗಿದೆ. ಈ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 5.09 ಲಕ್ಷಕ್ಕೆ ಏರಿಕೆಯಾಗಿದೆ. ರಾಜಧಾನಿ ಪಟನಾದಲ್ಲಿಯೇ ಹೆಚ್ಚಿನ ಸಂಖ್ಯೆಯ ಸೋಂಕಿತರು ಪತ್ತೆಯಾಗುತ್ತಿದ್ದಾರೆ. (ಏಜೆನ್ಸೀಸ್)