LIVE: ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್ 2020ರಲ್ಲಿ ಶಿಕ್ಷಣ ನೀತಿ ಬಗ್ಗೆ ಪ್ರಧಾನಿ ಮೋದಿ ಮಾತು

Modi in hakhaton
Published on

ನವದೆಹಲಿ: ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್ 2020 ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ. ಹ್ಯಾಕಥಾನ್ ಕಾರ್ಯಕ್ರಮವನ್ನು ಬನಾರಸ್ ಹಿಂದು ಯೂನಿವರ್ಸಿಟಿಯಲ್ಲಿ ಆಯೋಜಿಸಲಾಗಿದೆ.

ಹೊಸ ಶಿಕ್ಷಣ ನೀತಿಯು ನಿಮ್ಮ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯದ ಅನುಭವವನ್ನು ವಿಸ್ತಾರಗೊಳ್ಳುವಂತೆ ಮಾಡಲು ಬಯಸುತ್ತದೆ. ನಿಮ್ಮ ಸಹಜವಾದ ಅಭಿರುಚಿಯನ್ನು ಉತ್ತೇಜಿಸಿ ನಿಮಗ ಸೂಕ್ತ ಮಾರ್ಗದರ್ಶನ ನೀಡಲು ಬಯಸುತ್ತದೆ.  ಈ ಹ್ಯಾಕಥಾನ್ ನೀವು ಪ್ರಯತ್ನಿಸಿದ ಮೊದಲ ಸಮಸ್ಯೆಯೂ ಅಲ್ಲ, ಕೊನೆಯದ್ದೂ ಅಲ್ಲ. ಯುವಜನರಾದ ನಿಮ್ಮಿಂದ ನಾನು ಬಯಸುವುದು ಮೂರು ಅಂಶಗಳನ್ನು- ಕಲಿಯುವುದು, ಪ್ರಶ್ನಿಸುವುದು ಮತ್ತು ಸಮಸ್ಯೆ ಬಗೆಹರಿಸುವುದು ಈ ಮೂರು ಅಂಶಗಳನ್ನು ನೀವು ರೂಢಿಸಿಕೊಳ್ಳಬೇಕು. ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದೇ ಅಂಶವನ್ನು ಪ್ರತಿಫಲಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್ ಎಂಬುದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಭಾಗವಹಿಸಬಹುದಾದ ವೇದಿಕೆಯಾಗಿದ್ದು, ಇದರಲ್ಲಿ ನಾವು ನಿತ್ಯಬದುಕಿನಲ್ಲಿ ಎದುರಿಸುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಉತ್ತೇಜನ ನೀಡಲಾಗುತ್ತದೆ. ಆ ಮೂಲಕ ನವೋನ್ವೇಷಣೆಯ ಚಿಂತನೆ ಮತ್ತು ಉತ್ಪನ್ನಗಳಿಗೆ ವೇದಿಕೆ ಒದಗಿಸುವುದಲ್ಲದೆ, ಸಮಸ್ಯೆ ನಿವಾರಿಸುವ ಮೈಂಡ್ ಸೆಟ್​ ಅನ್ನು ರೂಪಿಸಲಾಗುತ್ತದೆ.

ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್ ಮೊಟ್ಟ ಮೊದಲ ಆವೃತ್ತಿ 2017ರಲ್ಲಿ ನಡೆದಿದ್ದು, ಅದರಲ್ಲಿ 42000 ವಿದ್ಯಾರ್ಥಿಗಳು ಬಾಗವಹಿಸಿದ್ದರು. 2018ರಲ್ಲಿ ಭಾಗವಹಿಸಿದವರ ಸಂಖ್ಯೆ 1 ಲಕ್ಷ ಆಗಿದ್ದರೆ, 2019ರಲ್ಲಿ ಇದು 2 ಲಕ್ಷ ಆಗಿತ್ತು. ಈ ಸಲದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್​ನ ಮೊದಲ ಸುತ್ತಿನಲ್ಲಿ 4.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರ ಗ್ರಾಂಡ್ ಫಿನಾಲೆ ಈಗ ನಡೆಯುತ್ತಿದ್ದು, 37 ಕೇಂದ್ರ ಸರ್ಕಾರದ ಇಲಾಖೆಗಳು, 17 ರಾಜ್ಯ ಸರ್ಕಾರದ ಇಲಾಖೆಗಳು ಮತ್ತು 20 ಇಂಡಸ್ಟ್ರಿಗಳು ಮುಂದಿಟ್ಟಿರುವ 243 ಸಮಸ್ಯೆಗಳಿಗೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net