

ಚಂಡೀಗಢ: ಪ್ರೀತಿಸುವ ಹುಡುಗ-ಹುಡುಗಿ ಮನೆ ಬಿಟ್ಟು ಓಡಿಹೋಗುವುದು, ಬಳಿಕ ಮದುವೆಯಾಗುವುದು ಅಥವಾ ಆ ಪ್ರೀತಿ ದುರಂತ ಅಂತ್ಯ ಕಾಣುವುದೆಲ್ಲ ಏನೂ ಹೊಸದೇನಲ್ಲ. ಅದೇ ರೀತಿ ಇಲ್ಲೊಂದು ಜೋಡಿ ಮನೆ ಬಿಟ್ಟು ಓಡಿ ಹೋಗಿದ್ದಲ್ಲದೆ ಹೈಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ.
ಚಂಡೀಗಢದ 22 ವರ್ಷದ ಗುರ್ವಿಂದರ್ ಸಿಂಗ್, 19 ವರ್ಷದ ಗುಲ್ಜಾ ಕುಮಾರಿ ಪರಸ್ಪರ ಪ್ರೀತಿಸುತ್ತಿದ್ದಾರೆ. ಮಾತ್ರವಲ್ಲ, ಮದುವೆಯಾಗಬೇಕು, ಅದಕ್ಕೆ ಮನೆಯವರು ಅಡ್ಡಿ ಆಗಬಾರದು ಎಂದು ಮನೆ ಬಿಟ್ಟು ಓಡಿಹೋಗಿದ್ದಾರೆ. ಆದರೆ ಮದುವೆಗೆ ಹುಡುಗಿ ಮನೆಯವರ ವಿರೋಧವಿದ್ದು, ಮದುವೆಯಾಗಲು ಬೇಕಾಗಿರುವ ಆಧಾರ್ ಕಾರ್ಡ್ ಮುಂತಾದ ಕೆಲವು ದಾಖಲೆಗಳು ಹುಡುಗಿಯ ಮನೆಯಲ್ಲೇ ಇರುವುದರಿಂದ ಇವರ ಮದುವೆಗೆ ಹಿನ್ನಡೆಯಾಗಿದೆ. ಹೀಗಾಗಿ ಅಲ್ಲಿಯವರೆಗೂ ಲಿವಿಂಗ್ ಟುಗೆದರ್ ರೀತಿ ಇರಲು ಇಬ್ಬರೂ ನಿರ್ಧರಿಸಿದ್ದಾರೆ.
ಆದರೆ ಈ ಮಧ್ಯೆ ಹುಡುಗಿಯ ಮನೆಯವರ ಕಡೆಯಿಂದ ಅಪಾಯ ಇರುವ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸುವಂತೆ ಆದೇಶಿಸಲು ಕೋರಿ ಈ ಜೋಡಿ ಪಂಜಾಬ್-ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ ಇವರ ಕೋರಿಕೆಯನ್ನು ಹೈಕೋರ್ಟ್ ನಿರಾಕರಿಸಿದೆ. ಲಿವ್-ಇನ್ ರಿಲೇಷನ್ಷಿಪ್ ನೈತಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ. ಅದಕ್ಕಾಗಿ ನಿಮಗೆ ರಕ್ಷಣೆ ನೀಡುವಂತೆ ಸೂಚಿಸಲೂ ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಚ್.ಎಸ್. ಮದನ್ ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿ ಪ್ರೇಮಿಗಳ ಅರ್ಜಿ ಇತ್ಯರ್ಥಗೊಳಿಸಿದ್ದಾರೆ.