ಯಾರು ತಾನೆ ಸುಂದರವಾಗಿ ಕಾಣಲು ಬಯಸುವುದಿಲ್ಲ?

teeth
Published on
DentalCare Anusha
ನಿಜ, ಸೌಂದರ್ಯ ಎಲ್ಲರೂ ಬಯಸುವ ಸಂಗತಿ. ತಾನು ಸುಂದರವಾಗಿ ಕಾಣಬೇಕೆನ್ನುವುದು ಎಲ್ಲರ ಆಶಯ. ಅದರಲ್ಲೂ ಮುಖದ ಸೌಂದರ್ಯದ ಕುರಿತು ಎಲ್ಲರಿಗೂ ಆಸಕ್ತಿ. ಮುಖದ ಸೌಂದರ್ಯಕ್ಕೆ ಮುಖ್ಯ ಕಾರಣ ಸರಿಯಾದ ದವಡೆ ಮತ್ತು ಹಲ್ಲುಗಳು.

ಸುಂದರ ನಗು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ/ ಅಲ್ಲದೆ ನಗುವಾಗ ಅಥವಾ ಸಂತೋಷದಿಂದ ಇರುವಾಗ ನಮ್ಮ ದೇಹದಲ್ಲಿ ಕೆಲವು ಬಗೆಯ ಹಾರ್ವೇನ್​ಗಳು ಬಿಡುಗಡೆಯಾಗುತ್ತವೆ. ಇದರಿಂದ ಒತ್ತಡವು ಸಹಜವೆಂಬಂತೆ ಕಡಿಮೆಯಾಗುತ್ತದೆ. ನಾವು ನಕ್ಕಾಗ ಮುಖದ ಸ್ನಾಯುಗಳಿಗೆ ವ್ಯಾಯಾಮವಾಗಿ ಅವುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಾವು ಮತ್ತಷ್ಟು ಸುಂದರವಾಗಿ ಕಾಣಬಹುದು. ಪಾರ್ಕ್​ಗಳಲ್ಲಿ ನಡೆಯುವ ಲಾಫಿಂಗ್ ಕ್ಲಬ್ ಅಥವಾ ನಗೆಕೂಟಗಳು ಈಗೀಗ ಬಹಳ ಖ್ಯಾತಿ ಪಡೆದಿವೆ. ಜನರು ಗುಂಪಾಗಿ ವಿಧವಿಧವಾಗಿ ನಕ್ಕು ವ್ಯಾಯಾಮ ಮಾಡುವುದರಿಂದ ತಮ್ಮನ್ನು ಸಾಮಾಜಿಕವಾಗಿಯೂ ಆರೋಗ್ಯವಾಗಿಸಿಕೊಳ್ಳುತ್ತಿದ್ದಾರೆ.

ಹೀಗೆ ಆರಾಮವಾಗಿ ನಗಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಾಯಿಯ ಆರೋಗ್ಯ ಮುಖ್ಯ. ದೇಹದ ಆರೋಗ್ಯ ಮತ್ತು ಬಾಯಿಯ ಆರೋಗ್ಯ ಎರಡೂ ಪರಸ್ಪರ ಅವಲಂಬಿತವಾಗಿವೆ. ಹಲ್ಲು ಮತ್ತು ವಸಡಿನ ಆರೋಗ್ಯ ದೇಹದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮವನ್ನು ಉಂಟುಮಾಡುತ್ತದೆ. ಬಹಳಷ್ಟು ಜನರಿಗೆ ಬಾಯಿಯ ಆರೋಗ್ಯ ಮತ್ತು ಹಲ್ಲಿನ ಚಿಕಿತ್ಸೆಯ ಬಗ್ಗೆ ಅರಿವಿಲ್ಲದಿರುವುದು ಅಥವಾ ಅದರ ಬಗೆಗಿನ ಅಲಕ್ಷ್ಯದಿಂದಾಗಿ ಚಿಕಿತ್ಸೆಯನ್ನು ಮುಂದೂಡುವುದು ಉಂಟು. ಇದು ಯೋಚಿಸಬೇಕಾದ ಸಂಗತಿ.

ಸರಳವಾಗಿ ಹೇಳುವುದಾದರೆ ನಮ್ಮ ಹಲ್ಲು ಒಟ್ಟು ಮೂರು ಭಾಗಗಳಾಗಿ ರಚನೆಯಾಗಿದೆ. ಮೊದಲನೆಯದು ಎನಾಮೆಲ್. ಇದು ಹಲ್ಲಿನ ರಕ್ಷಾ ಕವಚವಾಗಿದೆ. ಹಲ್ಲಿನ ಒಳಭಾಗವಾದ ಡೆಂಟಿನ್ ಮತ್ತು ಪಲ್ಪ್​ಗಳನ್ನು ಬಾಹ್ಯ ಅಥವಾ ಹೊರಗಿನಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ದೇಹದ ಅತ್ಯಂತ ಕಠಿಣ ಭಾಗವಾದ ಎನಾಮೆಲ್ ಅನ್ನು ಸಕ್ಕರೆಯುಕ್ತ ಆಮ್ಲೀಯ ಪದಾರ್ಥಗಳು ಹಾನಿ ಮಾಡುತ್ತವೆ. ಜತೆಗೆ ಹಲ್ಲುಗಳನ್ನು ಕಡಿಯುವುದರಿಂದಲೂ ಎನಾಮೆಲ್​ನ ಸವೆತ ಉಂಟಾಗಿ ಸೂಕ್ಷ್ಮತೆ ಉಂಟಾಗುತ್ತದೆ.

ಎರಡನೆಯದು ಡೆಂಟಿನ್- ಇದು ಎನಾಮೆಲ್ ಗಿಂತ ಮೃದು ವಾಗಿದ್ದು ಟ್ಯುಬ್​ಗಳ ರೂಪದಲ್ಲಿ ರಚನೆಯಾಗಿದೆ. ಮೂರನೆಯದು ಪಲ್ಪ್ -ಇದು ಹಲ್ಲಿನ ಮಧ್ಯ ಮತ್ತು ಬಹುಮುಖ್ಯ ಭಾಗವಿದ್ದು ನರಗಳು ಮತ್ತು ರಕ್ತನಾಳಗಳನ್ನು ಒಳಗೊಂಡಿದೆ.

ಹಲ್ಲಿನ ತೊಂದರೆ ಅಥವಾ ಕಾಯಿಲೆಯು ನಿರಂತರವಾಗಿ ಬೆಳವಣಿಗೆ ಹೊಂದುತ್ತಿರುತ್ತದೆ ಮತ್ತು ಯಾವುದೇ ಹಂತದಲ್ಲೂ ಅದಕ್ಕೆ ಚಿಕಿತ್ಸೆಯನ್ನು ನೀಡದೆ ಬದಲಾಯಿಸಲು ಆಗುವುದಿಲ್ಲ. ಆರಂಭಿಕ ಹಂತದಲ್ಲೇ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ. ಇದರಿಂದ ಚಿಕಿತ್ಸೆಯು ವೇದನಾರಹಿತವಾಗಿರುತ್ತದೆ. ಅಲ್ಲದೆ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ.

ಚಿಕ್ಕದಾಗಿ ಶುರುವಾದ ದಂತ ಕುಳಿಯು ಎನಾಮೆಲ್ ಅಥವಾ ಡೆಂಟಿನ್​ಗಷ್ಟೇ ಸೀಮಿತವಾಗಿದ್ದಲ್ಲಿ ಹಲ್ಲು ತುಂಬುವುದರ ಮೂಲಕ ಸುಲಭವಾಗಿ ಸರಳವಾದ ಚಿಕಿತ್ಸೆಯನ್ನು ನೀಡಬಹುದು. ಚಿಕಿತ್ಸೆಯನ್ನು ತಡ ಮಾಡಿದ್ದಲ್ಲಿ ದಂತಕ್ಷಯ ಪ್ರಗತಿಗೊಂಡು ಪಲ್ಪ್ ಅನ್ನು ತಲುಪುತ್ತದೆ. ಈ ಹಂತದಲ್ಲಿ ರೂಟ್​ಕೆನಾಲ್ ಚಿಕಿತ್ಸೆ ಮಾಡಬೇಕಾಗುತ್ತದೆ. ಅದೇ ರೀತಿ ವಸಡು, ಆರಂಭಿಕ ಹಂತದಲ್ಲೇ ಚಿಕಿತ್ಸೆಗೆ ಒಳಗಾಗದ ಜಿಂಗೈವಿಟೀಸ್ (ಪರಿದಂತ) ಮುಂದುವರಿದು ಟಛ್ಟಿಜಿಟಛಟ್ಞಠಿಜಿಠಿಜಿಠ (ಪರಿದಂತದ ಉರಿಯೂತ) ಆಗಿ ವಸಡಿನ ಜೊತೆಗೆ ಹಲ್ಲುಗಳಿಗೂ ತೊಂದರೆ ಕೊಡಬಹುದು.

ದಂತ ವೈದ್ಯರು ಹಾಳಾದ ಹಲ್ಲುಗಳಿಗೆ ಚಿಕಿತ್ಸೆ ನೀಡುವುದಲ್ಲದೆ ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಹಲ್ಲುಗಳು ಮತ್ತು ವಸಡು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತಾರೆ. ಇದರೊಂದಿಗೆ ಯಾವುದೇ ರೀತಿಯ ಅಸಹಜತೆ ಕಂಡುಬಂದಲ್ಲಿ ಮುಂದೆ ಉಂಟಾಗಬಹುದಾದ ದೊಡ್ಡ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಯಾವುದೇ ರೀತಿಯ ಚಿಕಿತ್ಸೆಯನ್ನು ಮುಂದೂಡದೆ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತ. ಪ್ರತಿ ಆರು ತಿಂಗಳಿಗೊಮ್ಮೆ ನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ಬಾಯಿ ಮತ್ತು ದೇಹದ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net