

Health tips: ಬೆಂಡೆಕಾಯಿ ಒಂದು ಜನಪ್ರಿಯ ತರಕಾರಿಯಾಗಿದ್ದು, ಇದನ್ನು ಭಾರತೀಯ ಆಹಾರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಧಿಕವಾಗಿ ಜನರು ಇದನ್ನು ಫ್ರೈಗಳಲ್ಲಿ, ಸಾಂಬರುಗಳಲ್ಲಿ ಬಳಸಿ ಸೇವಿಸುತ್ತಾರೆ. ಇದು ಅಧಿಕ ಪೌಷ್ಟಿಕಾಂಶಗಳಿಂದ ಕೂಡಿದ್ದರೂ, ಕೆಲವೊಮ್ಮೆ ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೆಲವರಿಗೆ ಬೆಂಡೆಕಾಯಿ ತಿನ್ನುವುದರಿಂದ ಅಲರ್ಜಿಯಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಹಾಗೆಯೇ, ಇದರ ಸೇವನೆಯಿಂದ ಚಮದಲ್ಲಿ ಕೆರೆತ ಉಂಟಾಗುವುದು, ದದ್ದುಗಳು, ಉಸಿರಾಟದ ತೊಂದರೆ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಬೆಂಡೆಕಾಯಿ ಲೋಳೆ ಪದಾರ್ಥವಾಗಿರುವುದರಿಂದ ಕೆಲವರಿಗೆ ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು ಹಾಗೆಯೇ ಅಸ್ವಸ್ಥತೆಯನ್ನು ಉಂಟುಮಾಡಬಹುದು.
ಬೆಂಡೆಕಾಯಿಯಲ್ಲಿ ಫೈಬರ್ ಅಂಶ ಸಮೃದ್ಧವಾಗಿರುತ್ತದೆ. ಇದನ್ನು ಅತಿಯಾಗಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳಾದ ಉಬ್ಬರ, ಅತಿಸಾರ ಅಥವಾ ಹೊಟ್ಟೆನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಹೇಳುವುದಾದರೆ, ಕಡಿಮೆ ಜೀರ್ಣಶಕ್ತಿ ಹೊಂದಿರುವಂತವರು ಈ ಲೋಳೆ ಪದಾರ್ಥಗಳನ್ನು ಸೇವಿಸುವುದರಿಂದ ಅವರು ತೊಂದರೆಯನ್ನು ಅನುಭವಿಸಬಹುದು.
ಬೆಂಡೆಕಾಯಿಯಲ್ಲಿ ವಿಟಮಿನ್ K ಅಧಿಕ ಇದ್ದು, ಇದು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಆದರೆ, ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುವವರಿಗೆ, ಬೆಂಡೆಕಾಯಿಯ ಸೇವನೆಯು ಔಷಧಿಯ ಕಾರ್ಯಕ್ಷಮತೆಯ ಮೇಲೆ ವಿರುದ್ಧ ಪರಿಣಾಮ ಬೀರಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ.
ಬೆಂಡೆಕಾಯಿಯಲ್ಲಿ ಆಕ್ಸಲೇಟ್‌ಗಳು (Oxalates) ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವ ಸಾಧ್ಯತೆ ಹೆಚ್ಚಿದೆ. ಈ ಆಕ್ಸಲೇಟ್‌ಗಳು ಕ್ಯಾಲ್ಸಿಯಂನೊಂದಿಗೆ ಸಂಯೋಜನೆಗೊಳ್ಳುವುದರಿಂದ ಕಿಡ್ನಿಗಳಲ್ಲಿ ಕಲ್ಲುಗಳು ಆಗಬಹುದು. ವಿಶೇಷವಾಗಿ ಈ ತೊಂದರೆಯನ್ನು ಅನುಭವಿಸುವವರು ಬೆಂಡೆಕಾಯಿಯ ಸೇವನೆಯನ್ನು ಮಿತಿಗೊಳಿಸುವುದು ಒಳ್ಳೆಯದು. ಹಾಗೆಯೇ ಇದು ಮೂತ್ರಪಿಂಡದ ಕಾರ್ಯಕ್ಷಮತೆಯ ಮೇಲೆ ಒತ್ತಡವನ್ನು ಹೇರಬಹುದಾಗಿದೆ.
ಬೆಂಡೆಕಾಯಿಯು ಒಂದು ಉತ್ತಮ ಆಹಾರವಾಗಿದ್ದು, ಇದು ಮಧುಮೇಹಿಗಳಿಗೆ ಒಳ್ಳೆಯ ಆಹಾರ ಎಂದು ತಿಳಿಸಲಾಗಿದೆ. ಆದರೆ, ಕೆಲವೊಂದು ಅಧ್ಯಯನಗಳ ಪ್ರಕಾರ ಮಧುಮೇಹಿಗಳಲ್ಲಿ ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತೀವ್ರವಾಗಿ ಕಡಿಮೆಗೊಳಿಸುತ್ತದೆ. ಇದು ವಿಶೇಷವಾಗಿ ಮಧುಮೇಹದ ಔಷಧಿಗಳೊಂದಿಗೆ ಸೇವಿಸಿದಾಗ ಹೈಪೊಗ್ಲೈಸೀಮಿಯಾಕ್ಕೆ ಕಾರಣವಾಗಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ