

ಮಂಡ್ಯ: ಮೈಸೂರು ಸಂಸ್ಥಾನದ ಪ್ರಮುಖರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅನನ್ಯ. ಅದೇ ರೀತಿ ರೈತರಿಗೆ ಲೆಸ್ಲಿ ಕೋಲ್ಮನ್ ಅವರ ಕೊಡುಗೆಯೂ ಅಪಾರ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಬಣ್ಣಿಸಿದರು.
ಲೆಸ್ಲಿ ಕೋಲ್ಮನ್ ಅವರ ಸಂಸ್ಮರಣೆ ದಿನದ ಅಂಗವಾಗಿ ನಗರದ ಮೈಶುಗರ್ ಕಾರ್ಖಾನೆ ಆವರಣದಲ್ಲಿರುವ ಲೆಸ್ಲಿ ಕೋಲ್ಮನ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಲ್ಲೊಂದಾಗಿರುವ ಮೈಶುಗರ್ ಪ್ರಾರಂಭಿಸಿ, ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬನ್ನು ಈ ಪ್ರಾಂತ್ಯದಲ್ಲಿ ಬೆಳೆಯುವಂತೆ ಮಾಡಿದರು ಎಂದು ಹೇಳಿದರು.
ಕೆನಡಾದ ಟೊರಾಂಟೋ ರಾಜ್ಯದ ಆಂಟೇರಿಯೋ ಪಟ್ಟಣದಲ್ಲಿ 1878ರ ಜೂ.16ರಂದು ಜನಿಸಿದ ಕೋಲ್ಮನ್ ಅವರು, ಆಂಟೇರಿಯೋ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದು ಮೈಸೂರು ಸರ್ಕಾರದ ನೆರವಿನಿಂದ ಜರ್ಮನ್‌ನ ಗಟಿಂಗೆನ್ ವಿವಿಯಲ್ಲಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮೈಸೂರು ಸಂಸ್ಥಾನದಲ್ಲಿ ಕೀಟ ಮತ್ತು ಶಿಲೀಂಧ್ರ ವಿಜ್ಞಾನಿಯಾಗಿ, ತರುವಾಯ ವ್ಯವಸಾಯ ಇಲಾಖೆಯ ನಿರ್ದೇಶಕರಾಗಿ ದುಡಿದು 1934ರಲ್ಲಿ ನಿವೃತ್ತರಾದರು. ಈ ಅವಧಿಯಲ್ಲಿ ನಿಷ್ಠಾವಂತ ಮತ್ತು ದಕ್ಷ ಸೇವೆಯ ಮೂಲಕ ಕೋಲ್ಮನ್ ಅವರು ಮೈಸೂರಿನ ಸ್ಥಿತಿಗತಿಗಳಿಗೆ ತಕ್ಕಂತೆ ಮಾರ್ಪಾಡು ಮಾಡಿ ಜೋಡಿಸುವ ಮೂಲಕ ಇಲ್ಲಿನ ಕೃಷಿ ಪದ್ಧತಿಯನ್ನು ವೈಜ್ಞಾನಿಕ ಬುನಾದಿಯ ಮೇಲೆ ಸ್ಥಾಪಿಸಿ ಆಧುನೀಕರಿಸುವ ಪ್ರಯತ್ನ ಬಹಳ ಮಟ್ಟಿಗೆ ಸಫಲಗೊಂಡಿತು ಎಂದು ವಿವರಿಸಿದರು.
ಮೈಸೂರು ಸರ್ಕಾರದ ಕೃಷಿ ಕ್ಷೇತ್ರದಲ್ಲಿ ಕೋಲ್ಮನ್ ಅವರು ಹಲವಾರು ಪರಿಣಾಮಕಾರಿ ಕೆಲಸಗಳನ್ನು ಮಾಡುವ ಮೂಲಕ ರೈತರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಮಲೆನಾಡಿನ ಮುಖ್ಯ ಬೆಳೆ ಅಡಕೆಗೆ ತಗಲುವ ಶಿಲೀಂಧ್ರಜನ್ಯ ಕೊಳೆರೋಗದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಆಳವಾದ ಮತ್ತು ವ್ಯಾಪಕ ಸಂಶೋಧನೆಗಳನ್ನು ನಡೆಸಿದ ಕೋಲ್ಮನ್ ಫೈಟಾಫ್ತೊರ ಅರಕೀ ಎಂಬ ವೈಜ್ಞಾನಿಕ ಹೆಸರಿನ ಆ ಶಿಲೀಂಧ್ರದ ರೂಪರೇಖೆಗಳನ್ನು ವಿವರಿಸಿ ಅದರ ಹಾವಳಿಯನ್ನು ತಡೆಗಟ್ಟಲು ಬೋರ್ಡೋ(ಮೈಲುತುತ್ತ ಮತ್ತು ಸುಣ್ಣದ ತಿಳಿ) ಮಿಶ್ರಣದ ಸಿಂಪಡಿಕೆಯನ್ನು ಅಳವಡಿಸಿಕೊಟ್ಟರು. ಮುಂಗಾರು-ಹಿಂಗಾರು ಮಳೆಗಳ ಅವಧಿಯಲ್ಲಿ ಸಮರೋಪಾದಿಯಾಗಿ ವ್ಯವಸ್ಥೆಗೊಳಿಸಿದ್ದ ಕಾರ್ಯಕ್ರಮ ಈಗಲೂ ಸೂಕ್ತ ಮಾರ್ಪಾಡುಗಳೊಂದಿಗೆ ಅಸ್ತಿತ್ವದಲ್ಲಿದೆ. ಕಾಫಿ ಬೆಳೆಗೆ ತಗಲುವ ಎಲೆರೋಗ, ಕೊಳೆರೋಗಗಳ ದೀರ್ಘ ಅಧ್ಯಯನ ನಡೆಸಿ ಅವುಗಳ ಹತೋಟಿಗೆ ಬೋರ್ಡೋ ಮಿಶ್ರಣ ಸಿಂಪಡಿಕೆಯನ್ನು ಅನುಷ್ಠಾನಕ್ಕೆ ತಂದರು. ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಖುಷ್ಕಿ ಬೆಳೆಗಳಿಗೆ ಕಂಟಕವಾದ ಆರುಕಾಲು ಚಿಟ್ಟೆ ಅಥವಾ ಕುದುರೆಮೂತಿ ಚಿಟ್ಟೆಯ ಸಮಗ್ರ ಅಧ್ಯಯನ ಮಾಡಿ ಸರಳರೀತಿಯ ನಿವಾರಣೋಪಾಯ ಸೂಚಿಸಿದರು. ಇಂತಹ ಹಲವಾರು ರೋಗಗಳ ಹತೋಟಿಗೆ ಕ್ರಮಗಳನ್ನು ಕೈಗೊಂಡರು. ಮಂಡ್ಯ ಜಿಲ್ಲೆಯ ಇಂದಿನ ಏಳಿಗೆಯಲ್ಲಿ ಕೋಲ್ಮನ್ ಅವರ ರಚನಾತ್ಮಕ ಪಾತ್ರ ಉಲ್ಲೇಖಾರ್ಹ. ಅವರು ವಹಿಸಿದ ವಿಶೇಷ ಆಸಕ್ತಿಯ ಫಲವಾಗಿ ಮಂಡ್ಯ ಸಕ್ಕರೆ ನಗರವಾಯಿತು. ನಂತರ ಅವರು ಸ್ವದೇಶಕ್ಕೆ ತೆರಳಿ ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡರು. ಬಳಿಕ ಅಪಘಾತದಲ್ಲಿ ಅವರು ಇಹಲೋಕ ತ್ಯಜಿಸಿದರು ಎಂದು ವಿವರಿಸಿದರು.
ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಆಟೋ ವೆಂಕಟೇಶ್, ಮುದ್ದೇಗೌಡ, ಪಾಂಡು, ಮಹೇಂದ್ರ ಇತರರಿದ್ದರು.