

ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಣೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರಸಭೆಯಲ್ಲಿ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಹೊಸ ಬಡಾವಣೆ ಸೇರಿಸಿಕೊಂಡು ಮಂಡ್ಯ ನಗರಸಭೆ ವ್ಯಾಪ್ತಿಯನ್ನು ವಿಸ್ತರಿಸಲು ಕ್ರಮ ವಹಿಸಲಾಗುವುದು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು ಎಂದು ಹೇಳಿದರು.
ಮಂಡ್ಯ ನಗರಸಭೆಯ ವ್ಯಾಪ್ತಿ ದೊಡ್ಡದಾದರೆ ಅಥವಾ ನಗರಸಭೆ ಭವಿಷ್ಯದಲ್ಲಿ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದರೆ ಅಭಿವೃದ್ಧಿ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಈ ವಿಚಾರವಾಗಿ ಈಗಾಗಲೇ ಹೊಸ ಬಡಾವಣೆಗಳ ನಿವಾಸಿಗಳಿಂದ ಮನವಿಗಳೂ ಬಂದಿವೆ. ಈ ಹಿನ್ನೆಲೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಸೂಕ್ತ ತೀರ್ಮಾನದೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರವಿ ರಾಜೀನಾಮೆ ನೀಡಿದ್ದಾರೆ. ಆದರೆ ಇನ್ನೂ ಅಂಗೀಕಾರವಾಗಿಲ್ಲ. ಸಾಮಾನ್ಯ ಸಭೆ ಬಳಿಕ ಅಂಗೀಕಾರವಾಗುವ ಸಾಧ್ಯತೆಯಿದೆ. ಆ ನಂತರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಜತೆಗೆ, ಮುಡಾ ಅಧ್ಯಕ್ಷರ ಬದಲಾವಣೆಯು ಪಕ್ಷದ ಆಂತರಿಕ ವಿಚಾರ. ಆ ಬಗ್ಗೆ ವರಿಷ್ಠರೊಂದಿಗೆ ಸಮಾಲೋಚಿಸಿ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.
ಮುಡಾ ಅಧ್ಯಕ್ಷ ನಯೀಂ ಹಾಜರಿದ್ದರು.
ರಾಜ್ಯಸರ್ಕಾರದಿಂದ ಹಣ ಬಿಡುಗಡೆ
ಮಂಡ್ಯ ನಗರದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ 52 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ಅಭಿವೃದ್ಧಿ ಕೆಲಸಕ್ಕಾಗಿ ಅನುದಾನ ಬಿಡುಗಡೆಗೆ ಸಹಕರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಬಿಡುಗಡೆಯಾಗಿರುವ ಅನುದಾನದಲ್ಲಿ ಮಂಡ್ಯ ನಗರದ ಪ್ರಮುಖ ವೃತ್ತ, ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಗತ್ಯವಿರುವೆಡೆ ತಡೆಗೋಡೆ ನಿರ್ಮಿಸಲಾಗುವುದು. ನಗರದ ಸೌಂದರ್ಯೀಕರಣ ಕಾಮಗಾರಿ ಮಾಡಲಾಗುವುದು. ಮಂಡ್ಯ ನಗರದಲ್ಲಿ ಬ್ಯಾಸ್ಕೆಟ್‌ಬಾಲ್ ಅಂಕಣ ನಿರ್ಮಾಣಕ್ಕೂ ಅನುದಾನ ಮೀಡಲಿಸಲಾಗಿದೆ ಎಂದರು.
60 ಕೋಟಿ ರೂ ವೆಚ್ಚದಲ್ಲಿ ‘ಅಮೃತ ಭವನ’: 9 ವರ್ಷದ ಹಿಂದೆ ಮಂಡ್ಯ ಜಿಲ್ಲೆಯ ಅಮೃತೋತ್ಸವ ನಡೆದಿದೆ. ಅದರ ನೆನೆಪಿನಲ್ಲಿ ಅಮೃತ ಭವನ ನಿರ್ಮಿಸುವ ಉದ್ದೇಶವಿದೆ. ಆದರೆ, ಈವರೆಗೆ ಆ ಪ್ರಯತ್ನವಾಗಿರಲಿಲ್ಲ. ಇದೀಗ 60 ಕೋಟಿ ರೂ ವೆಚ್ಚದಲ್ಲಿ ಅಮೃತ ಭವನ ನಿರ್ಮಿಸಲು ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗಿದೆ. ಈ ಭವನದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಕಚೇರಿ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದು ರವಿಕುಮಾರ್ ಗಣಿಗ ತಿಳಿಸಿದರು.
ವಾಲಿಬಾಲ್ ಆಟದ ತಾಲೀಮು ಮತ್ತು ತರಬೇತಿಗಾಗಿ ಬಳಕೆಯಾಗುತ್ತಿದ್ದ ಒಳಾಂಗಣ ಕ್ರೀಡಾಂಗಣ ಪಕ್ಕದ ಜಾಗದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ನಿರ್ಮಿಸಲುದ್ದೇಶಿಸಿರುವ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಗುರುತಿಸಿದೆ. ಆದರೆ, ಈ ಬಗ್ಗೆ ವಾಲಿಬಾಲ್ ಆಟಗಾರರು ಮತ್ತು ಜಿಲ್ಲಾ ವಾಲಿಬಾಲ್ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚಿಸಲಾಗುವುದು. ಮಾತ್ರವಲ್ಲದೆ ಬೇರೆ ಜಾಗ ಗುರುತಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜೆ.ಸಿ.ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ನಗರದ ಹೃದಯಭಾಗದಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿಯ ಜಯಚಾಮರಾಜೇಂದ್ರ ಒಡೆಯರ್ ವೃತ್ತವನ್ನು ಪಾರಂಪರಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರ ಜತೆಗೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ ಎಂದು ರವಿಕುಮಾರ್ ಹೇಳಿದರು.
ಈ ಕಾಮಗಾರಿಗಾಗಿ 2.5 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಂತೆಯೇ ಬಿ.ಜಿ.ದಾಸೇಗೌಡ ವೃತ್ತದ(ಫ್ಯಾಕ್ಟರಿ ಸರ್ಕಲ್) ಅಭಿವೃದ್ಧಿಗೆ 1 ಕೋಟಿ ರೂ ಮೀಸಲಿಡಲಾಗಿದೆ. ಡಾ.ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಸಮುದಾಯ ಭವನದವರೆಗೆ ಡೆಲ್ಟ ಯೋಜನೆಯಡಿ 6.50 ಕೋಟಿ ರೂ ವೆಚ್ಚದಲ್ಲಿ ಸೈಕಲ್ ಪಾಥ್ ನಿರ್ಮಿಸಲುದ್ದೇಶಿಸಲಾಗಿದೆ. ನೂರಡಿ ರಸ್ತೆಗೆ ಗಣ್ಯರ ನಾಮಕರಣ ಮಾಡುವ ಸಂಬಂಧ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ ಎಂಂದು ವಿವರಿಸಿದರು.