ಅತಿಯಾಗಿ ತಿನ್ನುವುದರಿಂದ ಮಾತ್ರವಲ್ಲ ನೀವು ಮಾಡೋ ಈ ತಪ್ಪುಗಳಿಂಗಲೂ ಬೊಜ್ಜು ಸಮಸ್ಯೆ ಕಾಡುತ್ತೆ ಎಚ್ಚರ! Obesity

Obesity
Published on

Obesity : ಇಂದಿನ ವೇಗದ ಜೀವನಶೈಲಿಯಲ್ಲಿ ಬೊಜ್ಜು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ತಪ್ಪು ಆಹಾರ ಪದ್ಧತಿ, ಜೀವನಶೈಲಿ ಮತ್ತು ಅನಾರೋಗ್ಯಕರ ಅಭ್ಯಾಸಗಳು ತೂಕ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಬೊಜ್ಜಿನಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಕೀಲು ಸಮಸ್ಯೆಗಳಂತಹ ಅನೇಕ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಬೊಜ್ಜಿನ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು, ಪ್ರತಿ ವರ್ಷ ಮಾರ್ಚ್ 4ರಂದು "ವಿಶ್ವ ಬೊಜ್ಜು ದಿನ"ವನ್ನು ಆಚರಿಸಲಾಗುತ್ತದೆ.

ಅತಿಯಾಗಿ ತಿಂದಾಗ ಮಾತ್ರ ಬೊಜ್ಜು ಹೆಚ್ಚಾಗುತ್ತದೆ ಎಂದು ಹಲವು ಭಾವಿಸಿದ್ದಾರೆ. ಆದರೆ, ಅದೊಂದೆ ಕಾರಣವಲ್ಲ, ನಾವು ಮಾಡುವ ಕೆಲವೊಂದು ಮಿಸ್ಟೇಕ್​ಗಳು ಕೂಡ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಆ ಮಿಸ್ಟೇಕ್​ಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಸಾಕಷ್ಟು ನಿದ್ರೆ ಮಾಡದಿರುವುದು

ತಡರಾತ್ರಿಯವರೆಗೂ ಎಚ್ಚರವಾಗಿರುವುದು, ಮೊಬೈಲ್ ಮತ್ತು ವೆಬ್ ಸೀರಿಯಲ್‌ಗಳಿಗೆ ವ್ಯಸನಿಯಾಗುವುದು ನಿದ್ರಾಹೀನತೆಗೆ ಕಾರಣವಾಗಬಹುದು. ಈ ಅಭ್ಯಾಸ ಗ್ರೆಲಿನ್ ಎಂಬ ಹಾರ್ಮೋನ್‌ನ ಅತಿಯಾದ ಉತ್ಪಾದನೆಗೆ ಕಾರಣವಾಗುತ್ತದೆ.ಇದರಿಂದ ಹಸಿವು ಹೆಚ್ಚಾಗುತ್ತದೆ. ಈ ವೇಳೆ ನೀವು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತೀರಿ. ತಿಂದಾಗ ಸಹಜವಾಗಿ ತೂಕ ಹೆಚ್ಚಾಗುತ್ತದೆ. ಆದ್ದರಿಂದ, ನೀವು ಬೊಜ್ಜು ನಿಯಂತ್ರಿಸಲು ಬಯಸಿದ್ದಲ್ಲಿ ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಉತ್ತಮ.

ವಿಪರೀತ ಒತ್ತಡ

ತುಂಬಾ ಒತ್ತಡದಿಂದಾಗಿ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಾಗಬಹುದು. ಇದು ಹೆಚ್ಚುವರಿ ಕೊಬ್ಬು ಶೇಖರಣೆಗೆ ಕಾರಣವಾಗಬಹುದು, ವಿಶೇಷವಾಗಿ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಹೆಚ್ಚಾಗಬಹುದು. ಹೀಗಾಗಿ ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಮತ್ತು ವ್ಯಾಯಾಮ ಮಾಡುವುದು ಒಳ್ಳೆಯದು.

ವ್ಯಾಯಾಮದ ಕೊರತೆ

ದೈಹಿಕ ಚಟುವಟಿಕೆಯಿಲ್ಲದ ಜಡ ಜೀವನಶೈಲಿಯು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ಪ್ರತಿದಿನ ಕನಿಷ್ಠ 30 ರಿಂದ 40 ನಿಮಿಷಗಳ ಕಾಲ ನಡೆಯುವುದು ಅಥವಾ ವ್ಯಾಯಾಮ ಮಾಡುವುದು ಆರೋಗ್ಯಕರ.

ಸರಿಯಾದ ಸಮಯಕ್ಕೆ ಊಟ ಮಾಡದಿರುವುದು

ನಿಮಗೆ ಅನಿಸಿದಾಗಲೆಲ್ಲ ತಿನ್ನುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಕೊಬ್ಬು ಹೆಚ್ಚಾಗುತ್ತದೆ. ಹೀಗಾಗಿ ಪ್ರತಿದಿನ ನಿಯಮಿತ ಸಮಯಕ್ಕೆ ತಿನ್ನುವುದರಿಂದ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಪಡೆಯಬಹುದು.

ವಿಶ್ವ ಬೊಜ್ಜು ಒಕ್ಕೂಟ (WOF) 2015ರಲ್ಲಿ ವಿಶ್ವ ಬೊಜ್ಜು ದಿನವನ್ನು ಪ್ರಾರಂಭಿಸಿತು. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO)ಯು ಕೂಡ ಬೆಂಬಲಿಸುತ್ತಿದೆ. ಬೊಜ್ಜುಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಈ ದಿನವನ್ನು 2020ರಿಂದ ವ್ಯಾಪಕವಾಗಿ ಆಚರಿಸಲಾಗುತ್ತಿದೆ. ಬೊಜ್ಜಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಚರ್ಚಿಸಲು ಆರೋಗ್ಯ ತಜ್ಞರು, ಸರ್ಕಾರಗಳು ಮತ್ತು ಸಂಸ್ಥೆಗಳು ಒಟ್ಟಾಗಿ ಸೇರುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net