

Kohli and Rohit : ನಿರ್ಣಾಯಕ ಪಂದ್ಯಗಳನ್ನು ಆಡುವಾಗ ಬಹಳ ಜಾಗರೂಕತೆಯಿಂದ ಆಡಬೇಕಾಗುತ್ತದೆ. ಕೊಂಚ ಯಾಮಾರಿದರೂ ಶ್ರಮ ವ್ಯರ್ಥವಾಗಿಬಿಡುತ್ತದೆ. ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ನಿನ್ನೆ (ಮಾ.04) ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಫೈನಲ್ಗೆ ಲಗ್ಗೆ ಇಟ್ಟಿದೆ. ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಲು ಭಾರತಕ್ಕೆ ಇನ್ನೊಂದು ಹೆಜ್ಜೆ ಬಾಕಿ ಇದೆ.
ಇಂತಹ ನಿರ್ಣಾಯಕ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ತೋರಿದ ಅಸಡ್ಡೆಗೆ ನಾಯಕ ರೋಹಿತ್ ಶರ್ಮ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದರು. ಇದುವರೆಗೂ ರೋಹಿತ್, ಕೊಹ್ಲಿ ಇಷ್ಟು ಕೋಪಗೊಂಡಿರುವುದನ್ನು ಕೆಲವರು ನೋಡಿರುವುದಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸಂಪೂರ್ಣ ಸ್ಟೋರಿಯನ್ನು ನಾವೀಗ ತಿಳಿದುಕೊಳ್ಳೋಣ.
ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡುವಾಗ ನಾವು ತುಂಬಾ ಜಾಗರೂಕರಾಗಿರಬೇಕು, ವಿಶೇಷವಾಗಿ ಫೀಲ್ಡಿಂಗ್ ಮಾಡುವಾಗ. ಅಂತಹ ನಿರ್ಣಾಯಕ ಪಂದ್ಯಗಳಲ್ಲಿ ಪ್ರತಿ ರನ್ ತುಂಬಾ ಮೌಲ್ಯಯುತವಾಗಿದೆ. ನಾವು ಅದನ್ನು ಸಿಂಗಲ್ ಆಗಿ ಬಿಟ್ಟರೆ, ಕೊನೆಗೆ ಅದು ನಮಗೆ ಶಾಪವಾಗಬಹುದು. ಈ ಕಾರಣಕ್ಕಾಗಿಯೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಮಾಡಿದ ತಪ್ಪನ್ನು ಸಹಿಸಲಿಲ್ಲ. ಇಬ್ಬರೂ ಮೈದಾನದಲ್ಲೇ ಕುಲದೀಪ್ ವಿರುದ್ಧ ವಾಗ್ದಾಳಿ ನಡೆಸಿದರು.
ಆಸೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದ 32ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಕುಲದೀಪ್ ಯಾದವ್ ಮಿಡ್-ವಿಕೆಟ್ ಮೇಲೆ ಚೆಂಡನ್ನು ಎಸೆದರು. ಈ ವೇಳೆ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಚೆಂಡನ್ನು ಬಾರಿಸಿ, ಅಲೆಕ್ಸ್ ಕ್ಯಾರಿ ಅವರೊಂದಿಗೆ ಸಮನ್ವಯ ಸಾಧಿಸಿ ಸಿಂಗಲ್ ರನ್ ಗಳಿಸಿದರು. ಈ ಸಂದರ್ಭದಲ್ಲಿ ವೇಗವಾಗಿ ಓಡಿದ ವಿರಾಟ್ ಕೊಹ್ಲಿ, ತಕ್ಷಣವೇ ಚೆಂಡನ್ನು ತೆಗೆದುಕೊಂಡು ನಾನ್-ಸ್ಟ್ರೈಕರ್‌ನ ತುದಿಯಲ್ಲಿದ್ದ ಕುಲದೀಪ್ ಕಡೆಗೆ ಎಸೆದರು. ಆದರೆ, ಕುಲ್‌ದೀಪ್ ಚೆಂಡನ್ನು ಹಿಡಿಯಲು ಪ್ರಯತ್ನಿಸಲಿಲ್ಲ. ಕನಿಷ್ಠ ಅದನ್ನು ತಡೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ. ಚೆಂಡು ವಿಕೆಟ್‌ಗಳಿಗೆ ಬಡಿಯುತ್ತದೆ ಎಂಬ ಕಾರಣದಿಂದಾಗಿ ಕುಲದೀಪ್ ಆ ರೀತಿ ಮಾಡಿದರು.
ಅಷ್ಟರಲ್ಲಿ ಕವರ್ಸ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಶರ್ಮ ಬಂದು ತಕ್ಷಣ ಚೆಂಡನ್ನು ನಿಲ್ಲಿಸಿದರು. ಈ ಮೂಲಕ ಆಸೀಸ್ ಹೆಚ್ಚುವರಿ ರನ್ ಗಳಿಸುವುದನ್ನು ತಡೆದರು. ಈ ವೇಳೆ ಕುಲದೀಪ್ ಯಾದವ್ ಅವರನ್ನು ನೋಡಿ ರೋಹಿತ್ ಕೋಪಗೊಂಡರು. ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಕಿಡಿಕಾರಿದರು. ಅತ್ತ ಕೊಹ್ಲಿ ಕೂಡ ಕೂಗಾಡಿದರು. ಇಬ್ಬರು ಇಷ್ಟೊಂದು ಕೋಪದಿಂದ ಕೂಗಾಡಿದ್ದನ್ನು ನೋಡಿ ಕುಲದೀಪ್ ಕಕ್ಕಾಬಿಕ್ಕಿಯಾದರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಭರ್ಜರಿ ಗೆಲುವಿನ ಓಟ ಮುಂದುವರಿಸಿರುವ ಟೀಮ್ ಇಂಡಿಯಾ, 8 ವರ್ಷಗಳ ಬಳಿಕ ಪುನಾರಂಭಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸತತ ಮೂರನೇ ಹಾಗೂ ಒಟ್ಟಾರೆ ಐದನೇ ಬಾರಿಗೆ ಫೈನಲ್‌ಗೇರಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ) ಸಮಯೋಚಿತ ಆಟ ಹಾಗೂ ವೇಗಿ ಮೊಹಮದ್ ಶಮಿ (48ಕ್ಕೆ 3) ಸಹಿತ ಇತರ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ ಮೊದಲ ಸೆಮಿಫೈನಲ್‌ನಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು 4 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ರೋಹಿತ್ ಶರ್ಮ ಬಳಗ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವನ್ನು ಕಡಿಮೆಗೊಳಿಸಿದೆ. ನ್ಯೂಜಿಲೆಂಡ್ ಹಾಗೂ ದ.ಆಫ್ರಿಕಾ ನಡುವಿನ ವಿಜೇತರ ಎದುರು ಭಾರತ ತಂಡ ಭಾನುವಾರ ದುಬೈನಲ್ಲೇ ಪ್ರಶಸ್ತಿಗಾಗಿ ಕಾದಾಡಲಿದೆ.
ದುಬೈ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಉಪಾಂತ್ಯ ಕಾದಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ಗೆ ಇಳಿಯಿತು. ನಾಯಕ ಸ್ಟೀವನ್ ಸ್ಮಿತ್ (73 ರನ್, 96 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಎಡಗೈ ಬ್ಯಾಟರ್ ಅಲೆಕ್ಸ್ ಕ್ಯಾರಿ (61 ರನ್, 57 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನಡುವೆಯೂ ಭಾರತೀಯರ ಸಂಘಟಿತ ದಾಳಿಗೆ ನಲುಗಿದ ಆಸೀಸ್ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ 43 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ 36 ವರ್ಷದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ (45 ರನ್, 62 ಎಸೆತ, 3 ಬೌಂಡರಿ) ಅಮೂಲ್ಯ ಜತೆಯಾಟದ ಮೂಲಕ ಚೇಸಿಂಗ್‌ಗೆ ಬಲ ತುಂಬಿದರು. ಕೊನೆಯಲ್ಲಿ ವಿಕೆಟ್ ಕೀಪರ್-ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ (42* ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 267 ರನ್‌ಗಳಿಸಿ ಗೆಲುವು ಒಲಿಸಿಕೊಂಡಿತು. (ಏಜೆನ್ಸೀಸ್)