

ಧರ್ಮರಕ್ಷಣೆಗೆ ಶಿವಾಜಿ ಮಹಾರಾಜರಿಗೆ ಜೊತೆಯಾಗಿದ್ದವರು ಉಡಲು ಬಟ್ಟೆ ಇಲ್ಲದ, ಉಣಲು ಸರಿಯಾಗಿ ಆಹಾರವಿಲ್ಲದ ಬಡ ಮಾವಳಿಗ ಕಾಡು ಜನ. ಪರಕೀಯರ ದುರಾಕ್ರಮಣ ಕೊನೆಗೊಳಿಸಬೇಕು. ಈ ದೇಶದ ಧರ್ಮ-ಸಂಸ್ಕೃತಿಯನ್ನು ಕಾಪಾಡಬೇಕೆಂಬ ಶಪಥದೊಂದಿಗೆ ಇವರು ಹೋರಾಡಿದರು. ಶಿವಾಜಿ ಅವರಿಗೆ ಧರ್ಮರಕ್ಷಣೆಯ ಶಿಕ್ಷಣ, ಸಂಸ್ಕಾರ ನೀಡಿದರು. ಅದೊಂದು ದಿನ ಶಿವಾಜಿ ಬಿಜಾಪುರದ ಸುಲ್ತಾನರು ನಿರ್ಲಕ್ಷ ಮಾಡಿದ, ರಕ್ಷಣಾ ದೃಷ್ಟಿಯಿಂದ ಮಹತ್ತರವಾಗಿದ್ದ ಕೋಟೆಯನ್ನು ತನ್ನ ಮಿತ್ರವೃಂದ ಮಾವಳಿ ಪೋರರ ಸಹಾಯದಿಂದ ಗೆದ್ದು, ಅದಕ್ಕೆ ತೋರಣಗಡ ಎಂಬ ಹೆಸರನ್ನಿಟ್ಟರು. ಸಾಕ್ಷಾತ್ ಅದು ಅವರ ಕನಸಿನ ಸ್ವರಾಜ್ಯಕ್ಕಿಟ್ಟ ತೋರಣವಾಗಿತ್ತು. ಅದರ ಮೇಲೆ ಭಗವಾಧ್ವಜ ರಾರಾಜಿಸಿತು.
ಆ ದುರ್ಗಮ ಕೋಟೆಯನ್ನು ದುರಸ್ತಿ ಮಾಡುವಾಗ ಅಲ್ಲಿದ್ದ ಮಾವಳಿ ಪೋರರಿಗೆ ಸಿಕ್ಕಿದ್ದು ಹಣದ ರಾಶಿಯ ಕೊಪ್ಪರಿಗೆಗಳು. ಅದನ್ನು ಕಂಡ ಆ ತರುಣರಿಗೆ ಕಿಂಚಿತ್ತೂ ಧನದ ಆಸೆ ಮೂಡಲಿಲ್ಲ. ತಮಗೆ ಸಿಕ್ಕಂಥ ಹಣ ಯಾರೂ ನೋಡಿಲ್ಲ. ಅದನ್ನು ನಾವು ಸ್ವಂತಕ್ಕೆ ಬಳಸಿದರೆ ಯಾರಿಗೂ ತಿಳಿಯುವುದಿಲ್ಲ ಎಂಬ ಆ ಕಲ್ಪನೆಯೇ ಅವರಿಗೆ ಅಸಹನೀಯವಾಗಿತ್ತು. ಅವರೊಳಗೆ ಮೂಡಿದ್ದು ಒಂದೇ ಭಾವ, ‘ಇದು ಮಹಾದೇವನಿಗೆ ಸೇರಿದ ಧನ. ಅದು ಅವನ ಕಾರ್ಯಕ್ಕೇ ಮೀಸಲಾಗಬೇಕು’. ತಮ್ಮ ಪಾಲಿಗೆ ಒಣರೊಟ್ಟಿ, ನದಿಯ ನೀರು, ಮರದ ನೆರಳು ಮತ್ತು ಶಿವಾಜಿಯ ಒಡನಾಟ ಇಷ್ಟು ಸಾಕು. ಇಷ್ಟರಲ್ಲಿ ಇವರಿಗೆ ಸಂತೃಪ್ತಭಾವ. ಉಳಿದಲ್ಲವೂ ಸ್ವರಾಜ್ಯಕ್ಕೆ ಸಮರ್ಪಿತ ಬದುಕು ಎನ್ನುವ ಉದಾತ್ತ ಆಲೋಚನೆ ಅವರದು.
ಹೌದು, ಇದು ಇತಿಹಾಸ. ಆದರೆ ವರ್ತ ಮಾನಕ್ಕೆ ಕೊಡಬೇಕಾದ ಶಿಕ್ಷಣ ಸಂಸ್ಕಾರದ ಮಾದರಿ. ಆದರೆ ದುರ್ದೈವ ಇಂದಿನ ಸುಶಿಕ್ಷಿತ ಸಮಾಜದಲ್ಲಿ ಹೆಚ್ಚು ಓದಿದವ ಹೆಚ್ಚು ಮೋಸ, ವಂಚನೆ ಮಾಡುತ್ತಾನೆ ಎಂಬ ನಿಷ್ಕರ್ಶೆಗೆ ಬರುವ ಕಾಲಘಟ್ಟದಲ್ಲಿ ನಾವಿರುವಾಗ ಯಾವ ಶಾಲಾ, ಕಾಲೇಜು ಕಲಿಸಲು ಸಾಧ್ಯವಾಗದ ಆ ನೈತಿಕ ಮೇರುಮಟ್ಟದ ಶಿಕ್ಷಣವನ್ನು ಶಿವಾಜಿ ಆ ಕಾಡು ಜನರಿಗೆ ಕಲಿಸಿದ್ದರು ಎನ್ನುವುದು ಪ್ರಸ್ತುತ ಕಾಲಮಾನದ ಸೋಜಿಗವೇ. ‘ವಿದ್ಯೆಯಿಂದ ಉಚ್ಚ ವಿಚಾರಗಳು ರಕ್ತಗತವಾಗಿ ಸ್ಪೂರ್ತಿ ಹೊಂದುವಂತಾಗಬೇಕು, ಪೌರುಷ ಉಕ್ಕುವಂತಾಗಬೇಕು, ಶೀಲ ಮೈದಾಳುವಂತಾಗಬೇಕು’ ಎನ್ನುವುದು ಶಿಕ್ಷಣ ದಿಂದ ನಾವು ಕಲಿಯಬೇಕಾದ ಮೌಲ್ಯ ಎಂಬುದನ್ನು ಸ್ವಾಮಿ ವಿವೇಕಾನಂದರು ಗುರುತಿಸಿ ದ್ದಾರೆ. ಇಂಥ ಸಂಸ್ಕಾರ ನೀಡುವ ಜವಾಬ್ದಾರಿ ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲಿದೆ.
(ಲೇಖಕರು ಅಧ್ಯಾಪಕರು)