

Hot Water : ಒತ್ತಡವನ್ನು ಕಡಿಮೆ ಮಾಡುವುದು ಸೇರಿದಂತೆ ಬಿಸಿನೀರಿನ ಸ್ನಾನದಿಂದ ಆಗುವ ಅನೇಕ ಆರೋಗ್ಯ ಪ್ರಯೋಜನಗಳ ಬಗ್ಗೆ ಈಗಾಗಲೇ ಹಲವಾರು ಅಧ್ಯಯನಗಳು ಪ್ರಕಟವಾಗಿವೆ. ಆದರೆ, ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಪುರುಷರಲ್ಲಿ ಫಲವತ್ತತೆ ಕಡಿಮೆಯಾಗಬಹುದು ಎಂದು ಆರೋಗ್ಯ ತಜ್ಞರು ಈಗ ಕಳವಳ ವ್ಯಕ್ತಪಡಿಸಿದ್ದಾರೆ.
ಹೌದು, ಬಿಸಿನೀರಿನ ಹೆಚ್ಚಿನ ತಾಪಮಾನವು ಪುರುಷರಲ್ಲಿ ವೀರ್ಯಾಣು ಗುಣಮಟ್ಟ ಮತ್ತು ಫಲವತ್ತತೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು ಎಂದು ಕೆಲವು ವೈಜ್ಞಾನಿಕ ಅಧ್ಯಯನಗಳು ಸೂಚಿಸುತ್ತವೆ.
ಪುರುಷರ ಫಲವತ್ತತೆ ಮತ್ತು ತಾಪಮಾನದ ನಡುವೆ ಪರಸ್ಪರ ಸಂಬಂಧವಿದೆ ಎಂದು ಸಂಶೋಧೆನೆ ಹೇಳಿದೆ. ಹೆಚ್ಚಿನ ತಾಪಮಾನವು ವೀರ್ಯಾಣುಗಳ ಸಂಖ್ಯೆ, ಅವುಗಳ ಚಲನಶೀಲತೆ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದಲ್ಲದೆ, ಆಗಾಗ ಬಿಸಿ ಸ್ನಾನ ಮಾಡುವುದರಿಂದ ವೃಷಣಗಳ ತಾಪಮಾನವು ಹೆಚ್ಚಾಗುತ್ತದೆ ಮತ್ತು ವೀರ್ಯ ಉತ್ಪಾದನೆ ಹಾಗೂ ಚಲನಶೀಲತೆ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.
ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಸಂಗಾತಿಗೆ ಇದು ಪ್ರಮುಖ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ, ಪುರುಷರು ತಣ್ಣೀರಿನಲ್ಲಿ ಅಥವಾ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಲು ಪ್ರಯತ್ನಿಸಬೇಕು ಎನ್ನುತ್ತಾರೆ ಫಲವತ್ತತೆ ತಜ್ಞ ಹಾಗೂ ಡ್ಯಾಮ್ ಹೆಲ್ತ್‌ನ ಸಹ ಸಂಸ್ಥಾಪಕ ಡಾ.ರಾಜೀವ್ ಅಗರ್ವಾಲ್.
ಬಿಸಿನೀರಿನಲ್ಲಿ ಸ್ನಾನ ಮಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಡಾ. ಅಗರ್ವಾಲ್ ಹೇಳುತ್ತಾರೆ. ದೇಹವು ಹೆಚ್ಚು ಬಿಸಿಯಾಗದಂತೆ ಎಚ್ಚರವಹಿಸಿ. ಲ್ಯಾಪ್‌ಟಾಪ್‌ಗಳನ್ನು ಅತಿಯಾಗಿ ಬಳಸುವುದರಿಂದಲೂ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ನಿದ್ರೆಯೊಂದಿಗೆ ಸಾಕಷ್ಟು ನೀರು ಕುಡಿಯಿರಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ. ಇವು ಒಟ್ಟಾರೆ ಆರೋಗ್ಯಕ್ಕೆ ಹಾನಿಕರ ಎಂದು ಅಗರ್ವಾಲ್ ಎಚ್ಚರಿಕೆಯನ್ನು ನೀಡಿದ್ದಾರೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.