ಮಹಾತ್ಮರ ನಡೆ ಪ್ರೇರಣೆಯಾಗಲಿ

Manollasa
Published on

| ಡಾ.ಗಣಪತಿ ಆರ್. ಭಟ್

ಪಿತೃವಾಕ್ಯ ಪಾಲನೆಯೇ ತನ್ನ ಧ್ಯೇಯ ಎಂದುಕೊಂಡು ಸೀತೆ ಹಾಗೂ ಲಕ್ಷ್ಮಣರ ಜೊತೆಗೂಡಿ ಸಾಗುತ್ತಿದ್ದ ಶ್ರೀರಾಮನಿಗೆ ಪ್ರಯಾಗದ ಬಳಿ ಬರುವಷ್ಟೊತ್ತಿಗೆ ಭರದ್ವಾಜ ಮುನಿಗಳ ಆಶ್ರಮ ಕಣ್ಣಿಗೆ ಬಿತ್ತು. ಮುನಿಗಳನ್ನು ಸಂದರ್ಶಿಸಿ ಮುನ್ನಡೆದರಾಯಿತು ಎಂದುಕೊಳ್ಳುತ್ತ ಆಶ್ರಮ ಪ್ರವೇಶಿಸಿದ ರಾಮನಿಗೆ ಅಲ್ಲಿ ದೊಡ್ಡ ಆತಿಥ್ಯವೇ ಸಿಕ್ಕಿತು. ಅದಾಗಲೇ ಅಯೋಧ್ಯೆಯ ವೃತ್ತಾಂತಗಳೆಲ್ಲವನ್ನೂ ತಿಳಿದಿದ್ದ ಭರದ್ವಾಜ ಮುನಿಗಳು ರಾಮನನ್ನು ಕುರಿತು-‘ವಿನಾಕಾರಣ

ನಿನಗೆ ದೇಶಚ್ಯುತಿಯಾದ ವಿಷಯ ತಿಳಿದು ಬೇಸರವಾಯಿತು. ಗಂಗೆ-ಯಮುನೆಯರ ಸಂಗಮ ಸ್ಥಳವಾದ ಈ ಜಾಗ (ಪ್ರಯಾಗ) ಪವಿತ್ರ ಕ್ಷೇತ್ರವಷ್ಟೇ ಅಲ್ಲ, ನಿನ್ನ ವನವಾಸಕ್ಕೆ ಹೇಳಿ ಮಾಡಿಸಿದ ಜಾಗ. ನಿನ್ನ ಪತ್ನಿ ಮತ್ತು ಸಹೋದರನ ಜೊತೆ ಇಲ್ಲಿಯೇ ಸುಖವಾಗಿ ವನವಾಸದ ಕಾಲ ಕಳೆ’ ಎಂದು ವಿನಂತಿಸಿಕೊಂಡರು.

ಒಂದು ವೇಳೆ ಭರದ್ವಾಜರ ಮಾತಿನಂತೆ ರಾಮಾದಿಗಳು ಅಲ್ಲಿಯೇ ನೆಲೆಸಿ ಬಿಟ್ಟಿದ್ದರೆ ಯಾವ ಪ್ರಯಾಸವನ್ನೂ ಪಡದೇ 14 ವರ್ಷ ಸುಖಮಯವಾಗಿ ಕಳೆದು ಹೋಗುತ್ತಿತ್ತು. ಆದರೆ ತಾನು ತನ್ನ ತಂದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂಬ ಸಂಕಲ್ಪ ತೊಟ್ಟು ಕಾಡಿಗೆ ಬಂದಿರುವುದು ಮತ್ತು ಅಯೋಧ್ಯೆಯಿಂದ ಸಂಪೂರ್ಣ ವಿಮುಖನಾಗಿ 14 ವರ್ಷಗಳ ಕಾಲ ವನವಾಸ ಆಚರಿಸುತ್ತೇನೆಂದು ಕೈಕೇಯಿಗೆ ಕೊಟ್ಟ ಮಾತು ರಾಮನಿಗೆ ಥಟ್ಟನೇ ನೆನಪಾಯಿತು. ಅಯೋಧ್ಯೆಗೆ ಹತ್ತಿರವಿರುವ ಈ ಪ್ರದೇಶದಲ್ಲಿ ತಾನು ಉಳಿದುಕೊಂಡರೆ ವಿಷಯ ತಿಳಿದ ಪ್ರಜೆಗಳು ಕ್ರಮೇಣ ತನ್ನನ್ನು ಸಂದರ್ಶಿಸುವ ನೆಪದಲ್ಲಿ ಇಲ್ಲಿಗೆ ಬರಲಾರಂಭಿಸುತ್ತಾರೆ. ಸರ್ವಥಾ ಇದು ಆತ್ಮಸಮ್ಮತ ವಿಷಯವಲ್ಲವೆಂದು ಭರದ್ವಾಜ ಮುನಿಗಳ ವಿನಂತಿಯನ್ನು ತಿರಸ್ಕರಿಸಿದ. ರಾಮನ ಮನದಿಂಗಿತವನ್ನು ಅರ್ಥೈಸಿಕೊಂಡ ಭರದ್ವಾಜ ಮುನಿಗಳು ಅವನಿಗೆ ಮುನ್ನಡೆಯಲು ಅನುಮತಿಯಿತ್ತರು. ಇದನ್ನೂ ಓದಿ: ಮನೋಲ್ಲಾಸ: ಮೊದಲು ನಾವು ಬದಲಾಗೋಣ

ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಬರುವ ಈ ಪ್ರಸಂಗದ ಮೂಲಕ ಶ್ರೀರಾಮನ ವ್ಯಕ್ತಿತ್ವದರ್ಶನವಾಗುತ್ತದೆ. ಆಡಿದ ಮಾತಿಗೆ ಇರಬೇಕಾದ ಬದ್ಧತೆ, ತೆಗೆದುಕೊಂಡ ನಿರ್ಧಾರದಲ್ಲಿ ಇರಬೇಕಾದ ಅಚಲತೆ ಹಾಗೂ ಮಾಡುವ ಕರ್ತವ್ಯದ ಕುರಿತಾದ ನಿಷ್ಠತೆ ಮನುಷ್ಯನನ್ನು ದೊಡ್ಡವ್ಯಕ್ತಿಯನ್ನಾಗಿ ಮಾಡುತ್ತದೆ. ಎಂಥ ಸ್ಥಿತಿಯಲ್ಲಿಯೂ ತನ್ನ ಮನಸ್ಸು, ಮಾತುಗಳನ್ನು ಬದಲಿಸದೆ ಅಂದುಕೊಂಡದ್ದನ್ನೇ ಮಾಡುವವನು ಮಹಾನ್ ವ್ಯಕ್ತಿಯೆನಿಸಿಕೊಳ್ಳಬಲ್ಲ. ನಡೆ, ನುಡಿ ಚಿಂತನೆಗಳಲ್ಲಿ ಏಕರೂಪತೆಯೇ ಇಲ್ಲದೆ, ಮಹಾನ್ ವ್ಯಕ್ತಿಯಾಗಲು ಹೇಗೆ ಸಾಧ್ಯ? ಸುಭಾತವೊಂದು ಹೀಗೆ ಹೇಳುತ್ತದೆ:

ಯಥಾ ಚಿತ್ತಂ ತಥಾ ವಾಚೋ ಯಥಾ ವಾಚಸ್ತಥಾ ಕ್ರಿಯಾಃ |

ಚಿತ್ತೇ ವಾಚಿ ಕ್ರಿಯಾಯಾಂ ಚ ಮಹತಾಂ ಏಕರೂಪತಾ ||

ಮನಸಲ್ಲಿರುವುದನ್ನೇ ಮಾತನಾಡಿ, ಆಡಿದ್ದನ್ನೇ ಮಾಡಿ ತೋರಿಸುವವರು ಮಹಾತ್ಮರೆನಿಸಿಕೊಳ್ಳುತ್ತಾರೆ. ನಮ್ಮ ಮನಸ್ಸು, ನುಡಿ, ನಡೆಗಳಿಗೆ ಜರಡಿ ಹಿಡಿದು ಸಾಣಿಸಿದರೆ ಒಂದಿಷ್ಟು ಭ್ರಷ್ಟತೆಯೆಂಬ ಕಲ್ಮಷ ನಮ್ಮಿಂದ ದೂರವಾಗಬಹುದು. ಈ ನಿಟ್ಟಿನಲ್ಲಿ ಮಹಾತ್ಮರ ಬದುಕು ನಮಗೆ ಆದರ್ಶವಾಗಲಿ.

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net