

ಒಂದು ಊರಿನಲ್ಲಿ ಮನ್ನಣೆ ಹೊಂದಿದ, ತುಂಬು ಸಂಸಾರ ನಡೆಸಿದ ವೃದ್ಧನ ಮಗನೊಬ್ಬ ಒಮ್ಮೆ ತಂದೆಯ ಬಳಿಗೆ ಬಂದು- ‘ನನಗೆ ಅಧ್ಯಾತ್ಮದಲ್ಲಿ ಆಸಕ್ತಿ ಇದೆ, ಈ ಸಂಸಾರ ಜಂಜಾಟ ಬೇಡ, ಸಂನ್ಯಾಸ ದೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿದ್ದೇನೆ’ ಎಂದ. ಅದನ್ನು ಕೇಳಿದ ಆ ವೃದ್ಧತಂದೆ ಮುಗುಳ್ನಗುತ್ತ, ‘‘ಸಂಸಾರ ಜಂಜಾಟ ಬೇಡ ಎಂದು ಸಂನ್ಯಾಸಕ್ಕೆ ಮೊರೆಹೋದರೆ ಮುಂದೆ ಒಂದಿನ ‘ಸಂನ್ಯಾಸ ಬೇಡ ಸಂಸಾರಕ್ಕೆ ಮರಳುತ್ತೇನೆ’ ಎಂಬ ಭಾವನೆ ಮೂಡುವ ಸಾಧ್ಯತೆ ಇರುತ್ತದೆ. ‘ಅಧ್ಯಾತ್ಮದಲ್ಲಿ ಆಸಕ್ತಿ ಇದೆ’ ಎನ್ನುವುದು ಸಂತೋಷದ ವಿಚಾರವೇ. ಒಂದೊಮ್ಮೆ ಅಧ್ಯಾತ್ಮವೇ ನಿನ್ನ ಲಕ್ಷ್ಯವಾದಲ್ಲಿ ಅದಕ್ಕೆ ಸಂನ್ಯಾಸವೇ ಬೇಕೆಂದಿಲ್ಲ, ನೀರಿನಲ್ಲಿ ಇರುವ ಕಮಲದೆಲೆಯಂತೆ ಅಂಟಿಯೂ ಅಂಟದೆ ನಿರ್ಲಿಪ್ತವಾಗಿ ಇರುವುದೇ ಅಧ್ಯಾತ್ಮ’ ಎಂದಾಗ ಮಗ ‘ಈ ಸಂಸಾರ ಎಂಬ ಮಾಯೆಯ ನಂಟಿಗೆ ಸಿಕ್ಕಿದವನು ಹೇಗೆ ನಿರ್ಲಿಪ್ತವಾಗಿ ಇರಲು ಸಾಧ್ಯ?’ ಎಂದು ಕೇಳಿದ.
ಆಗ ತಂದೆ- ‘‘ಮಗೂ, ಈ ಪ್ರಕೃತಿಯಲ್ಲೇ ನಮ್ಮೆಲ್ಲ ಪ್ರಶ್ನೆಗೆ ಉತ್ತರ ಅಡಗಿದೆ. ಪರಮಾತ್ಮನ ಸೃಷ್ಟಿಯಲ್ಲಿ ಇರುವ ಸಕಲ ಕ್ರಿಯೆಗೂ ಒಂದಕ್ಕೊಂದು ನಂಟಿದೆ. ಆಕಾಶದಿಂದ ಸುರಿಯುವ ಮಳೆ, ಗಾಳಿ, ಬೆಳಕು, ಮಳೆಯಿಂದ ತಣ್ಣಗಾಗುವ ಇಳೆ, ಇಳೆಯಲ್ಲಿ ಬೆಳೆಯುವ ಬೆಳೆ, ಹೀಗೆ ಒಂದಕ್ಕೊಂದು ನಂಟಿದ್ದರೂ ಅದನ್ನು ಗಂಟಾಗಿಸಿಕೊಳ್ಳದೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕರ್ಮವನ್ನು ಅಥವಾ ಕರ್ತವ್ಯವನ್ನು ನಿರ್ವಹಿಸುತ್ತ, ಯಾವುದೇ ಸುಖ, ಸಾಧನೆಗೆ ಹಿಗ್ಗದೆ, ದುಃಖ, ವೈಫಲ್ಯಕ್ಕೆ ಕುಗ್ಗದೆ ಇರುವಿಕೆಯೇ ನಿರ್ಲಿಪ್ತತೆ. ಅದೊಂದು ತಪಸ್ಸು, ಈ ಮಾಯೆಗೆ ಅಂಟಿಯೂ ಅಂಟದೆ ಅಂತರಂಗದಲ್ಲೇ ಅನ್ವೇಷಿಸುವ ತಪಸ್ಸು. ಈ ತಪಸ್ಸಿಗೆ ಸಂಸಾರಿ, ಸಂನ್ಯಾಸಿ ಎಂಬ ಭೇದವಿಲ್ಲ, ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಮಾಡಲೇಬೇಕಾದ ತಪಸ್ಸು’’ ಎಂದು ತಿಳಿಹೇಳಿದ.
ಹೀಗೆ ಜಗತ್ತಿನಲ್ಲಿ ಇರುವ ಪ್ರತಿಯೊಂದು ಜೀವಿಗೂ ತನ್ನ ಜೀವಿತಾವಧಿಯಲ್ಲಿ ಒಂದಲ್ಲ ಒಂದು ಬಾರಿ ಈ ಬದುಕನ್ನು ಹಸನುಗೊಳಿಸುವ ಬಗೆ ಹೇಗೆ? ಈ ಗೊಂದಲ, ಜಂಜಾಟಗಳಿಂದ ಮುಕ್ತನಾಗುವ ಪರಿ ಹೇಗೆ? ಎಂಬ ಪ್ರಶ್ನೆಗಳು ಕಾಡಿರಬಹುದು. ಶ್ರೀರಾಮಕೃಷ್ಣ ಪರಮಹಂಸರು ಸಂಸಾರದಲ್ಲಿದ್ದುಕೊಂಡು ಪರಮಾರ್ಥ ಸಾಧಿಸಿದ ಮಹಾನ್ ಸಾಧಕರು, ಅವರು ಹೇಳುವಂತೆ ‘ಭಗವಂತನ ಮಾಯೆಯಿಂದಲೇ ಜಗತ್ತು, ಸಂಸಾರಗಳೆಲ್ಲವೂ ಉದ್ಭವಿಸಿವೆ. ಮಹಾಮಾಯೆಯಲ್ಲಿ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಇವೆ. ವಿದ್ಯಾಮಾಯೆಯನ್ನು ಅವಲಂಬಿಸಿದವನ ಅಂತಃಚಕ್ಷುಗಳಿಗೆ ಮಾತ್ರ ಬೆಳಕು ಪ್ರಾಪ್ತಿ’.
ಹಾಗೆಯೇ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ನಿಷ್ಕಾಮಕರ್ಮ ಅಥವಾ ಕರ್ಮಸಂನ್ಯಾಸದಲ್ಲಿ ಬೋಧಿಸಿದಂತೆ ‘ಕಾರ್ಯಂ ಕರ್ಮ ಕರೋತಿ ಯಃ’ ‘ಯಾರ್ಯಾರಿಗೆ ಯಾವುದ್ಯಾವುದು ಕಾರ್ಯವೋ ಅವರವರು ಅದನ್ನದನ್ನು ಮಾಡಬೇಕು. ಕರ್ತವ್ಯ ನಿಭಾಯಿಸುತ್ತಲೇ ಫಲದಾಸೆ ಇಲ್ಲದೆ ಬದುಕುವವನೆ ನಿಜವಾದ ಸಂನ್ಯಾಸಿ ಮತ್ತು ನಿಜವಾದ ಯೋಗಿ, ಅಂಥವರೇ ಜನ್ಮರೂಪೀ ಬಂಧನದಿಂದ ಮುಕ್ತರಾಗಿ ಪರಮಾರ್ಥ ಸಾಧಿಸುತ್ತಾರೆ’. ಸಂನ್ಯಾಸ ಎಂದರೆ ನಾವು ಮಾಡಿದ್ದನ್ನೆಲ್ಲ ಭಗವಂತನಿಗೆ ಅರ್ಪಿಸುವುದೇ ಹೊರತು ಏನೂ ಮಾಡದೆ ಇರುವುದಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)