

ಡಾ.ಗಣಪತಿ ಆರ್ ಭಟ್
ಸಮಾಜ ಜೀವಿಗಳಾದ ನಾವು ಸುಂದರ ಸಮಾಜವನ್ನು ಕಟ್ಟಲು ಉದಾತ್ತವಾದ ಚಿಂತನೆಯನ್ನು ಹೊಂದಿರಬೇಕೇ ಹೊರತು ಸ್ವಾರ್ಥವಲ್ಲ. ಇದು ತನ್ನದು, ಅದು ಪರಕೀಯವೆಂದು ತಿಳಿಯುವ ಸಂಕುಚಿತ ಮನೋಭಾವದ ವ್ಯಕ್ತಿ ಹೆಚ್ಚೆಂದರೆ ತನ್ನ ಕುಟುಂಬವನ್ನೇ ಪ್ರಪಂಚವೆಂದು ತಿಳಿಯುತ್ತಾನೆ. ಇಂಥವರಿಂದ ಸಮಾಜಕ್ಕೆ ಯಾವ ಪ್ರಯೋಜನವಿದೆ ಹೇಳಿ? ತನ್ನಂತೆಯೇ ಇತರರೆಂಬ ಉದಾತ್ತವಾದ ಚಿಂತನೆಯುಳ್ಳವನಿಗೆ ಇಡೀ ಜಗತ್ತೇ ತನ್ನ ಮನೆಯಾಗಿ ಕಂಡರೂ ಅಚ್ಚರಿಯಿಲ್ಲ. ಇಂಥಹ ಉದಾರ ಮನೋಭಾವದವರು ನಿಜಾರ್ಥದಲ್ಲಿ ಸಮಾಜ ಕಟ್ಟುವ ಶಿಲ್ಪಿಗಳು.
ಈಶಾವಾಸ್ಯೋಪನಿಷತ್ತಿನಲ್ಲಿ ಮಾತೊಂದಿದೆ.
ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನು ಪಶ್ಯತಿ|
ಸರ್ವಭೂತೇಷು ಚಾತ್ಮಾನಂ ತತೋ ನ ವಿಜಿಗುಪ್ಸತೇ||
ಯಾರು ತನ್ನೊಳಗೆ ಎಲ್ಲರನ್ನೂ ಮತ್ತು ಎಲ್ಲರಲ್ಲಿಯೂ ತನ್ನನ್ನೂ ಕಾಣುತ್ತಾನೆಯೋ ಆತನು ಎಂದಿಗೂ ಇತರರ ಕುರಿತು ಅಸಡ್ಡೆಯನ್ನು ತೋರುವುದಿಲ್ಲವೆಂದು ಹೇಳುವ ಈ ಉಪನಿಷತ್ ವಾಣಿ ನಮ್ಮ ವೈಯಕ್ತಿಕ ಜೀವನದ ಕಾಳಜಿಯ ಜೊತೆಗೆ ಇತರರಲ್ಲಿಯೂ ಗೌರವ, ಪ್ರೀತಿಯ ಮನೋಭಾವನೆಯನ್ನು ಇರಿಸಬೇಕೆಂದು ಹೇಳುತ್ತದೆ. ಇದುವೇ ನಮಗಿರಬೇಕಾದ ಸಾಮಾಜಿಕ ಪ್ರಜ್ಞೆ. ವಿಪತ್ತೊಂದು ಸಂಭವಿಸಿದಾಗ, ಸಮಾಜ ತೊಂದರೆಯಲ್ಲಿ ಸಿಲುಕಿದಾಗ ಸ್ವಾರ್ಥವನ್ನೆಲ್ಲ ಬದಿಗೊತ್ತಿ ಉದಾರ ಮನೋಭಾವನೆಯಿಂದ ನಮ್ಮನ್ನು ನಾವು ಪರಹಿತದಲ್ಲಿ ಯೋಜಿಸಿಕೊಳ್ಳಬೇಕು. ಅಂದಾಗಲೇ ಸಮಸ್ಯೆಗೆ ಪರಿಹಾರ ಸಿಗುವುದು. ನಮ್ಮ ಬದುಕಿಗೆ ಬೆಲೆಯೂ ಬರುವುದು.
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)